ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ಶಾಖಾ ಮಠದ ನಿರ್ಮಾಣ ಸಮಿತಿ ಅಧ್ಯಕ್ಷರನ್ನಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕಗೊಳಿಸಲಾಗಿದೆ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ ಆದೇಶ ಪತ್ರ ನೀಡಿ, ಸನ್ಮಾನಿಸಿ ಅಯೋಧ್ಯೆ ಶಾಖಾ ಮಠದ ನಿರ್ಮಾಣ ಕಾಮಗಾರಿಯ ಪ್ರಗತಿಯ ಕುರಿತು ಮಾಹಿತಿ ನೀಡಿದರು.

ಶ್ರೀ ರಾಮ ಕ್ಷೇತ್ರದ 9 ಶಾಖಾಮಠಗಳನ್ನು ಸ್ಥಾಪಿಸುವ ಕನಸು, ಕಲ್ಪನೆಯ ಆಶಯದಂತೆ 5 ನೇ ಶಾಖಾ ಮಠವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು 2025ರಲ್ಲಿ ಕಾರ್ಯಪ್ರವೃತ್ತರಾಗಿದ್ದು ಪಂಚಾಂಗದ ಕೆಲಸ, ಸುತ್ತ ಕಾಂಪೌಂಡ್ ವಾಲ್, ಬೋರ್ ವೆಲ್ ನಿರ್ಮಿಸಲಾಗಿದ್ದು ೫೦ ಸಾವಿರ ಚ.ಅಡಿ ವಿಸ್ತೀರ್ಣದಲ್ಲಿ ಸುಮಾರು ರು. 20 ಕೋಟಿ ವೆಚ್ಚದಲ್ಲಿ ಶಾಖಾ ಮಠ ಮತ್ತು ಸಭಾಭವನ ನಿರ್ಮಿಸಲಾಗುತ್ತದೆ ಎಂದು ತಿಳಿಸಿ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಿ ಗೌರವಿಸಿದರು.

2026ರ ಜು 28 ರಂದು ತಮ್ಮ ಚಾತುರ್ಮಾಸ್ಯ ವ್ರತಾಚರಣೆಯನ್ನು ಬೈಂದೂರು ಹಾಗೂ 2027 ರ ಚಾತುರ್ಮಾಸ್ಯ ವ್ರತವನ್ನು ಕುಂಭಮೇಳ ನಡೆಯಲಿರುವ ನಾಸಿಕ್ ನಲ್ಲಿ ನಡೆಸಲಾಗುವುದೆಂದು ಅವರು ತಿಳಿಸಿದರು.


ನಳಿನ್ ಕುಮಾರ್ ಮಾತನಾಡಿ, ಶ್ರೀ ರಾಮ ದಕ್ಷಿಣೋತ್ತರವನ್ನು ಒಂದುಗೂಡಿಸಿದಂತೆ ಮಠದ ಮೂಲಕ ದಕ್ಷಿಣ ಉತ್ತರವನ್ನು ಸೇರಿಸುವ ಕಾರ್ಯದಲ್ಲಿ ಶ್ರಮಿಸುತ್ತೇನೆ ಎಂದರು. ಗುರುದೇವ ಮಠದ ಟ್ರಸ್ಟಿ ಪೀತಾಂಬರ ಹೆರಾಜೆ, ಜಯಂತ ಕೋಟ್ಯಾನ್, ವಿಕಾಸ್ ಪುತ್ತೂರು ಮಾತನಾಡಿದರು. ನಾಗೇಶ್ ಕುಮಾರ್ ಗೌಡ, ರಾಜೇಶ್ ಪೈ., ತಿಮ್ಮಪ್ಪ ಗೌಡ ಬೆಳಾಲು, ರವೀಂದ್ರ ಪೂಜಾರಿ ಅರ್ಲ, ಕೃಷ್ಣಪ್ಪ ಗುಡಿಗಾರ್, ಶಿವಕಾಂತ ಗೌಡ, ರತ್ನಾಕರ ಬುಣ್ಣನ್, ರಾಜೇಶ್ ಪೂಜಾರಿ, ಸುನಿಲ್ ಕನ್ಯಾಡಿ, ಕೇಶವ ಬಂಗೇರ, ಹರೀಶ್ ಸುವರ್ಣ, ಯತೀಶ್ ಸುವರ್ಣ, ವಿನೋಬಾ ಕಾರಂತ್, ಪುರುಷೋತ್ತಮ ಪೂಜಾರಿ, ತುಕಾರಾಮ ಸಾಲಿಯಾನ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು. ಕೇಶವ ಗೌಡ ನಿರೂಪಿಸಿದರು. ಸಂಪತ್ ಸುವರ್ಣ ವಂದಿಸಿದರು.