ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯ ಸಚಿವ ಸಂಪುಟದಲ್ಲಿ ಶಾಸಕ ಎನ್. ಚಲುವರಾಯಸ್ವಾಮಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ದೊರೆತ ಹಿನ್ನೆಲೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಸಂಭ್ರಮ, ಸಡಗರದಿಂದ ವಿಜಯೋತ್ಸವ ಆಚರಿಸಿದರು.

ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಎನ್.ಚಲುವರಾಯಸ್ವಾಮಿ ಅವರ ಬೃಹತ್ ಕಟೌಟ್ ಪ್ರತಿಷ್ಠಾಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೋಮವಾರ ಮಧ್ಯಾಹದಿಂದ ಸಂಜೆವರೆಗೂ ತಮಟೆ ಮೇಳದೊಂದಿಗೆ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಪರಸ್ಪರ ಶುಭಾಶಯ ಕೋರಿ ಅದ್ಧೂರಿ ವಿಜಯೋತ್ಸವ ಆಚರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಲು ಟಿ.ಮರಿಯಪ್ಪ ವೃತ್ತದ ಪ್ರಯಾಣಿಕರ ತಂಗುದಾಣದಲ್ಲಿ ದೊಡ್ಡದಾದ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ನೆರೆದಿದ್ದ ಕೈ ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಬೆಂಗಳೂರಿನ ರಾಜಭವನದಲ್ಲಿ ನಡೆಯುತ್ತಿದ್ದ ಪ್ರಮಾಣವಚನ ಸಮಾರಂಭದ ನೇರ ಪ್ರಸಾರ ವೀಕ್ಷಿಸಿದರು.

ಎನ್.ಚಲುವರಾಯಸ್ವಾಮಿ ಅವರು ದೇವರ ಹಾಗೂ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜಯಘೋಷ ಮೊಳಗಿಸಿ ಬೃಹತ್ ಪಟಾಕಿ ಸಿಡಿಸಿ ಸಂಭ್ರಮಿಸಿದರು.


ಕಳೆದ ಸಚಿವ ಸಂಪುಟ ರಚನೆ ವೇಳೆ ಎನ್.ಚಲುವರಾಯಸ್ವಾಮಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿರಾಸೆ ಮೂಡಿತ್ತು. ಆದರೆ, ಈ ಬಾರಿ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ದೊರೆತ ಸುದ್ದಿ ಪ್ರಕಟವಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಮಧ್ಯಾಹ್ನದಿಂದಲೇ ಕಾರ್ಯಕರ್ತರು ಮತ್ತು ಅಭಿಮಾನಿಗಳು ತಮ್ಮ ನಾಯಕನ ಪ್ರಮಾಣವಚನ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದರು. ಕಳೆದ ಬಾರಿ ಕೃಷಿ ಸಚಿವರಾಗಿ ಅವರ ಕಾರ್ಯವೈಖರಿ ಮತ್ತು ಅಭಿವೃದ್ಧಿ ಪರ ನಿಲುವು ಜನಪ್ರಿಯತೆ ತಂದುಕೊಟ್ಟಿತ್ತು ಎಂದು ಕಾರ್ಯಕರ್ತರು ಸ್ಮರಿಸಿದರು.

ಚಲುವರಾಯಸ್ವಾಮಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಲಭಿಸಿರುವುದರಿಂದ ಜಿಲ್ಲೆ ಹಾಗೂ ತಾಲೂಕಿನ ಅಭಿವೃದ್ಧಿಗೆ ಹೊಸ ಅಧ್ಯಾಯ ಆರಂಭಗೊಳ್ಳಲಿದೆ. ನೀರಾವರಿ, ಕೃಷಿ, ಗ್ರಾಮೀಣ ಭಾಗದ ರಸ್ತೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ಮಾತುಗಳು ನೆರೆದಿದ್ದ ಜನರಿಂದ ಕೇಳಿಬರುತ್ತಿದ್ದವು.