ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಕ್ವಿಂಟಲ್‌ಗೆ ₹2,000ರಿಂದ ₹2,400ರ ವರೆಗೆ ದರವಿದ್ದರೂ ಬೆಲೆ ಏರಿಕೆಯ ಖುಷಿ ರೈತರಿಗಿಲ್ಲ.

ರಫೀಕ್‌ ಕಲೇಗಾರ

ಅಣ್ಣಿಗೇರಿ:

ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಕ್ವಿಂಟಲ್‌ಗೆ ₹2,000ರಿಂದ ₹2,400ರ ವರೆಗೆ ದರವಿದ್ದರೂ ಬೆಲೆ ಏರಿಕೆಯ ಖುಷಿ ರೈತರಿಗಿಲ್ಲ. ಮಳೆ ಕೈಕೊಟ್ಟ ಪರಿಣಾಮ ಇಳುವರಿ ಕುಸಿತವಾಗಿದ್ದು ಬಿತ್ತನೆಗೆ ಮಾಡಿದ ಖರ್ಚು ಕೂಡ ಮರಳಿ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ರೈತರು ಮೆಕ್ಕೆಜೋಳ ಒಣಗಲು ಹಾಕಿರುವ ದೃಶ್ಯ ಬೆಳೆ ಸಂಕಷ್ಟಕ್ಕೆ ಸಾಕ್ಷಿಯಾಗಿದೆ. ಬೆಲೆ ಇದೆ, ಆದರೆ, ಮಾರಾಟಕ್ಕೆ ಉತ್ಪನ್ನವೇ ಇಲ್ಲ. ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹೆಸರು, ಉದ್ದು ಬೆಳೆಗಳ ಬೆನ್ನಲ್ಲೇ ಮೆಕ್ಕೆಜೋಳವೂ ರೈತರ ಕೈಹಿಡಿಯದಂತಾಗಿದೆ.

ಸ್ಥಳೀಯ ರೈತ ಬಾಬಾಜಾನ್ ಹಿರೇನಾಯ್ಕರ್ 12 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತಿದ್ದು ಎಕರೆಗೆ 8ರಿಂದ 10 ಕ್ವಿಂಟಲ್‌ ವರೆಗೆ ಇಳುವರಿ ಬರಲಿದೆ ಎಂದು ನಿರೀಕ್ಷಿಸಿದ್ದರು. ಆದರೆಮ ಮಳೆ ಕೊರತೆಯಿಂದ ಎಕರೆಗೆ ಕ್ವಿಂಟಲ್‌ ಸಹ ಬಂದಿಲ್ಲ. ಬೀಜ, ಗೊಬ್ಬರ, ಔಷಧ, ಬಿತ್ತನೆ ಹಾಗೂ ಉಳುಮೆ ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಆದರೆ, ಬಂದಿರುವ ಬೆಳೆ ನೋಡಿದರೆ ಮಾಡಿದ ಖರ್ಚು ಕೂಡ ಸರಿದೂಗುವುದಿಲ್ಲ. ಮಳೆ ಆಗದೆ ಬೆಳೆ ಹಾಳಾಯಿತು ಎಂದು ಅಳಲು ತೋಡಿಕೊಂಡರು.

ಈ ಬಾರಿ ಮೆಕ್ಕೆಜೋಳ ತೆನೆ ಹಿಡಿಯುವ ಹಂತದಲ್ಲಿ ಅಗತ್ಯ ತೇವಾಂಶ ಸಿಗದೆ ಬೆಳೆ ಒಣಗಿತು. ತೆನೆ ಬಂದರೂ ಕಾಳು ಸರಿಯಾಗಿ ತುಂಬದೆ ಇಳುವರಿ ಕುಂಠಿತವಾಗಿದೆ.

510 ಹೆಕ್ಟೇರ್‌ನಲ್ಲಿ ಬಿತ್ತನೆ:

ಅಣ್ಣಿಗೇರಿ ತಾಲೂಕಿನಲ್ಲಿ ಈ ಬಾರಿ ಒಟ್ಟು 510 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಮಳೆಯ ಅಭಾವದಿಂದ ಕಾಳು ಪೌಷ್ಟಿಕವಾಗಿ ಬೆಳೆಯದೆ ಇಳುವರಿ ಕಡಿಮೆಯಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ಎ.ಒ. ಈರಣ್ಣ ಗಡಾದ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಒಂದೆಡೆ ಬೆಲೆ ಏರಿಕೆ, ಮತ್ತೊಂದೆಡೆ ಇಳುವರಿ ಕುಸಿತ. ಉತ್ಪಾದನಾ ವೆಚ್ಚವೂ ಮರಳದ ಸ್ಥಿತಿಯಲ್ಲಿರುವ ರೈತರಿಗೆ ಸರ್ಕಾರ ವಿಳಂಬ ಮಾಡದೆ ಬರ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.ಕಳೆದ ಬಾರಿಗಿಂದ ಈ ಬಾರಿ ಮೆಕ್ಕೆಜೋಳದ ದರ ಹೆಚ್ಚಾಗಿದೆ. ತಾಲೂಕಿನಲ್ಲಿ ಇಳುವರಿ ಸಂಪೂರ್ಣವಾಗಿ ಕುಂಟಿತವಾಗಿರುವುದರಿಂದ ಈವರೆಗೆ ಶೇ. 30ರಷ್ಟು ಬೆಳೆ ಮಾತ್ರ ಮಾರಾಟಕ್ಕೆ ಬಂದಿದೆ.

ಸುನಿಲ್ ಗೌಡ ಪಾಟೀಲ ದಲಾಲ್ ಅಂಗಡಿ ಮಾಲೀಕ

ಏನಾದರೂ ಲಾಭವಾಗಬಹುದು ಎಂದು ಮೂರು ಎಕರೆಯಲ್ಲಿ ಮೆಕ್ಕೆಜೋಳ ಹಾಕಿದ್ದೆವು. ಆದರೆ, ಇಳುವರಿಯೇ ಬರದೆ ನಷ್ಟವಾಗಿದೆ. ಹೀಗಾದರೆ ರೈತರ ಬದುಕು ತೀವ್ರ ಸಂಕಷ್ಟಕ್ಕೀಡಾಗಲಿದೆ.

ಚಂದ್ರಶೇಖರ ಬಿನ್ನಾಳ, ಮೆಕ್ಕೆಜೋಳ ಬೆಳದ ರೈತ