ಗದಗ: ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಹಾಗೂ ಉದ್ಯೋಗ ನೇಮಕಾತಿಗಳಲ್ಲಿ ಒಳಮೀಸಲಾತಿ ಅಳವಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ದುರಗಪ್ಪ ಕಟ್ಟಿಮನಿ ಮಾತನಾಡಿ, ಪರಿಶಿಷ್ಟ 101 ಜಾತಿಗಳ ನಡುವೆ ಶೇ. 15ರಷ್ಟು ಮೀಸಲಾತಿ ಸಮಾನವಾಗಿ ಹಂಚಿಕೆಯಾಗಿಲ್ಲ. ಹಾಗಾಗಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಲು ಆಗ್ರಹಿಸಿ ಕಳೆದ 35 ವರ್ಷಗಳಿಂದ ರಾಜ್ಯದಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ನಿರಂತರ ಹೋರಾಟ ನಡೆದವು. ಈ ಬಗ್ಗೆ 2024ರ ಆ. 1ರಂದು ರಾಜ್ಯ ಸರ್ಕಾರಗಳಿಗೆ ಮೀಸಲಾತಿ ವರ್ಗೀಕರಿಸಲು ಅಧಿಕಾರವಿದೆ, ದತ್ತಾಂಶ ಸಂಗ್ರಹಿಸಿ ವರ್ಗೀಕರಿಸಲಿ ಎಂದು ಐತಿಹಾಸಿಕ ತೀರ್ಪು ನೀಡಿತು.

ರಾಜ್ಯ ಸರ್ಕಾರ ಕೋರ್ಟ್ ಆದೇಶದಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿ ವರದಿ ಪಡೆದು 2025ರ ಮೇ 25ರಂದು ಸಚಿವ ಸಂಪುಟ ವರದಿಯನ್ನು ಅಂಗೀಕರಿಸಿತು. ಆ ನಂತರ ವಿಧಾನಸಭೆ ಹಾಗೂ ವಿಧಾನಪರಿಷತ್ ಪರಿಶಿಷ್ಟರ ಉಪ ವರ್ಗೀಕರಣ ಮಸೂದೆ 2026ನ್ನು ಅಂಗೀಕರಿಸಿ ರಾಜ್ಯಪಾಲರ ಅಂಕಿತ ಪಡೆದು ಮಸೂದೆ ಅಧಿಕೃತವಾಯಿತು. ಆದರೂ ಒಳಮೀಸಲಾತಿ ಇಲ್ಲದೆ 56,432 ಉದ್ಯೋಗ ನೇಮಕಾತಿಗೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಒಳಮೀಸಲಾತಿ ಅಳವಡಿಸಿ, ಶೇ. 15ರಷ್ಟು ಮೀಸಲಾತಿಯಲ್ಲಿ ಉದ್ಯೋಗ ನೇಮಕಾತಿ ಮಾಡಲಿ. ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿಸಿ ಉದ್ಯೋಗ ನೇಮಕಾತಿ ಮಾಡುವ ಪ್ರಯತ್ನವನ್ನು ಕೈಬಿಡಬೇಕು. ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಸಮುದಾಯಗಳಿಗೆ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿ ನೀಡಲಿ.

ಪರಿಶಿಷ್ಟ ಜಾತಿಗೆ ಶೇ. 17 ಮತ್ತು ಪರಿಶಿಷ್ಟ ವರ್ಗಕ್ಕೆ ಶೇ. 7 ಒಟ್ಟು ಶೇ. 56 ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು. ಉದ್ಯೋಗ ನೇಮಕಾತಿ ನೇರ ನೇಮಕಾತಿ, ಬ್ಯಾಕ್‌ಲಾಗ್, ಬಡ್ತಿ, ಮುಂಬಡ್ತಿ ಒಳಗುತ್ತಿಗೆ ಎಸ್ಸಿ, ಎಸ್ಇಟಿಎಸ್ಪಿ ಆರ್ಥಿಕ ಸೌಲಭ್ಯ ಎಲ್ಲ ಹಂತಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಇದ್ದರು.