ಧಾರವಾಡ:
ಮಹಾತ್ಮ ಗಾಂಧೀಜಿಯವರ ಮೂಲ ಶಿಕ್ಷಣದ ಉದ್ದೇಶ ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಕೈ ಕೆಲಸ ನೀಡುವ ಜೀವನಾಧಾರಿತ ಶಿಕ್ಷಣ ಪದ್ಧತಿಯಾಗಿತ್ತು. ಇಂತಹ ಶಿಕ್ಷಣ ಮಾತ್ರ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಾಧ್ಯ ಎಂದು ಖ್ಯಾತ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ‘ಬೆಲ್ಲದ ಕೃಷಿ ಹಾಗೂ ಶಿಕ್ಷಣ ಪ್ರತಿಷ್ಠಾನ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಕೃಷಿ ಹಾಗೂ ಶಿಕ್ಷಣ ಸೇವಾ ಗೌರವ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. 1964ರಲ್ಲಿ ಶಿಕ್ಷಣದ ‘ಬೈಬಲ್’ ಎಂದೇ ಕರೆಯಲ್ಪಟ್ಟ ಡಾ. ಡಿ.ಎಸ್. ಕೋಠಾರಿ ಆಯೋಗವು ತನ್ನ ವರದಿಯಲ್ಲಿ ‘ಭಾರತದ ಭವಿಷ್ಯವು ವರ್ಗದ ಕೋಣೆಯಲ್ಲಿದೆ ಎಂದು ಪ್ರಸ್ತಾಪಿಸಿತ್ತು. ಸಮಾನ ಶಾಲಾ ಶಿಕ್ಷಣ ಎಲ್ಲರಿಗೂ ಲಭಿಸಬೇಕು ಎಂದು ಉಲ್ಲೇಖಿಸಿದ್ದು ಶಿಕ್ಷಣವನ್ನು ಶಕ್ತಿಯುತ ಸಾಧನವನ್ನಾಗಿ ಮಾಡುವುದಾಗಿತ್ತು. ಸಂವಿಧಾನದ ಪ್ರಸ್ತಾವನೆಯಲ್ಲೂ ಸಮಾನ ಶಾಲಾ ಶಿಕ್ಷಣದ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ, ಸಂವಿಧಾನದ ತೊಟ್ಟಿಲುಗಳೆಂದು ಕರೆಯಲ್ಪಡುವ ಸರ್ಕಾರಿ ಶಾಲೆಗಳನ್ನು ತಾತ್ಸಾರ ಮಾಡುತ್ತಿರುವುದು ವಿಪರ್ಯಾಸ ಎಂದರು.
ಇಂದು ಶಿಕ್ಷಣ ಅತ್ಯಂತ ಜಟಿಲ ಮತ್ತು ಸಂಕೀರ್ಣ ಸ್ಥಿತಿಯಲ್ಲಿದ್ದು ಶಿಕ್ಷಣ ವ್ಯಾಪಾರಿಕರಣ ಆಗುತ್ತಿರುವುದು ವಿಷಾದನೀಯ. ರಾಜ್ಯದಲ್ಲಿ 62 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಅನುತ್ತೀರ್ಣರಾಗಿರುವುದು ದುರಂತ. ಶಿಕ್ಷಣಕ್ಕಾಗಿ ಸರ್ಕಾರ ವಿನಿಯೋಗಿಸುವ ಹಣವೂ ಸಹ ಅತ್ಯಲ್ಪವಾಗಿದೆ. ಇಂದು ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಸಮರ್ಥ, ಪ್ರತಿಭಾನ್ವಿತ ಶಿಕ್ಷಕರಿದ್ದು ಅವರಿಗೆ ಪಾಠ ಬೋಧನೆಗೆ ಸಮಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನಾದರೂ ನೀಡುವದೆಂತು? ಸರ್ಕಾರ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರ ಕಡೆಗಣಿಸಿದರೆ ಭವಿಷ್ಯದಲ್ಲಿ ಸರ್ಕಾರವನ್ನು ಪ್ರಶ್ನಿಸಬೇಕಾಗಿದ ಅನಿವಾರ್ಯತೆ ಉಂಟಾಗಬಹುದೆಂದು ಎಚ್ಚರಿಸಿದರು.ಪ್ರಶಸ್ತಿ ಪ್ರದಾನ ಮಾಡಿದ ಅಖಿಲ ಭಾರತ ಪ್ರಾಥಮಿಕ ಶಾಲಾ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ಚಂದ್ರಕಾಂತ ಬೆಲ್ಲದ ಅವರು ಹೆಚ್ಚು ಸರ್ಕಾರಿ ಶಾಲೆಗಳಿಗೆ ಅನುದಾನ ನೀಡಿ ಶಾಲೆಗಳನ್ನು ಸಶಕ್ತಗೊಳಿಸಿದ್ದಾರೆ. ಗಡಿ ಶಾಲೆಗಳಿಗೂ ಅನುದಾನ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಜಾಗತಿಕ ಶಿಕ್ಷಣ ಮಾನದಂಡದಲ್ಲಿ ಭಾರತದ ಸ್ಥಾನ ಶೋಚನೀಯ. ಇಂದು ಸರ್ಕಾರವು ರಾಜ್ಯದ 25 ಸಾವಿರ ಮ್ಯಾಗ್ನೇಟ್ ಶಾಲೆಗಳಲ್ಲಿ ವಿಲೀನಗೊಳಿಸುವ ತಂತ್ರಗಾರಿಕೆ ಹೊಂದಿ, ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ ನಡೆಸಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ, ಗುಣಾತ್ಮಕ ಶಿಕ್ಷಣ ನೀಡುವ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಬೇಕಿದೆ ಎಂದು ಹೇಳಿದರು. ಪ್ರಜ್ಞಾ ನಡಕಟ್ಟಿ ಪ್ರಾರ್ಥಿಸಿದರು. ಶಂಕರ ಕುಂಬಿ ಸ್ವಾಗತಿಸಿದರು, ಶಂಕರ ಹಲಗತ್ತಿ ಅತಿಥಿಗಳನ್ನು ಪರಿಚಯಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.