ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣದಿಂದ ಮಾತ್ರ ಮಾನಸಿಕ ದಾಸ್ಯದಿಂದ ಹೊರ ಬರಲು ಸಾಧ್ಯ ಎಂದು ವಿಶ್ರಾಂತ ಕುಲಪತಿ ಡಾ. ಸಬಿಹಾ ಭೂಮಿಗೌಡ ತಿಳಿಸಿದರು.ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ದಲಿತ ಸಂಘರ್ಷ ಸಮಿತಿಯು ಡಾ.ಬಿ.ಆರ್. ಅಂಬೇಡ್ಕರ್ 135ನೇ ಜನ್ಮ ದಿನದ ಅಂಗವಾಗಿ ಬಹುತ್ವದ ಭಾರತವನ್ನು ಛಿದ್ರಗೊಳಿಸುತ್ತಿರುವ ಸರ್ಕಾರಗಳ ಧಮನಕಾರಿ ಹುನ್ನಾರ ಖಂಡಿಸಿ ಶೋಷಿತ ತಳ ಸಮುದಾಯಗಳ ಐಕ್ಯತಾ ಸಮಾವೇಶವನ್ನು ಅವರನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ನಮ್ಮ ಹಕ್ಕು. ಅವರ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಅವರು ಹೇಳುತ್ತಿದ್ದರು. ಶಿಕ್ಷಣದಿಂದ ಅರಿವು ಮೂಡಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನ್ಯಾಯ ಮತ್ತು ಅನ್ಯಾಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ನ್ಯಾಯ ಮತ್ತು ಅನ್ಯಾಯವನ್ನು ಅರ್ಥ ಮಾಡಿಕೊಳ್ಳಲು ಶಿಕ್ಷಣ ಒಂದು ಪ್ರಕರ ದಾರಿ ಎಂದು ಭಾವಿಸಿದ್ದ ಅಂಬೇಡ್ಕರ್ ಅವರು, ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಹುಡುಗರು, ಹುಡುಗಿಯರು ಒಟ್ಟಿಗೆ ಓದುವ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಅವರು ಆರಂಭಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳು ಪ್ರವೇಶ ಪಡೆಯುತ್ತಿದ್ದರು ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರು ಮಹಿಳೆಯರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮಹಿಳೆಯರ ಹಕ್ಕಿಗಾಗಿ ಶ್ರಮಿಸುತ್ತಿದ್ದರು ಮತ್ತು ಅವರ ಹಕ್ಕುಗಳನ್ನು ಗೌರವಿಸುತ್ತಿದ್ದರು. ಗೃಹಸ್ಥನಿಗೆ ಇರುವ ಅಧಿಕಾರ ಗೃಹಿಣಿಗೂ ಇದೆ ಎಂದು ಸಾರಿ ಸಾರಿ ಹೇಳುತ್ತಿದ್ದರು. ಅವರು ತಳ ಸಮುದಾಯದಿಂದ ಹಿಡಿದು ಈ ದೇಶದ ಎಲ್ಲಾ ನಾಗರೀಕರಿಗೆ ಸಂಬಂಧಿಸಿದ ಹಕ್ಕುಗಳನ್ನು ಕೊಡುವುದಕ್ಕೆ ಹಾಗೂ ಘನತೆಯಿಂದ ಬದುಕುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಇಡೀ ಸಮುದಾಯವನ್ನು ಸನ್ಮಾರ್ಗದ ಕಡೆಗೆ, ಸ್ವಾಭಿಮಾನ, ಘನತೆಯ ಬದುಕಿನ ಕಡೆಗೆ ಕರೆದೊಯ್ದದಂತಹ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನಾವು ಆತ್ಮವಿಶ್ವಾಸದಿಂದ ಬದುಕುವುದಕ್ಕೆ, ನಮ್ಮ ಹಕ್ಕುಗಳಿಗಾಗಿ ಹೋರಾಡುವುದಕ್ಕೆ ಅವರ ಚಿಂತನೆ, ಬದುಕು ಹಾಗೂ ಮಾತುಗಳು ನಮಗೆ ಪ್ರೇರಣೆಯಾಗಬೇಕು ಎಂದು ಅವರು ತಿಳಿಸಿದರು.
ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಜೆ. ಸೋಮಶೇಖರ್ ಮುಖ್ಯ ಭಾಷಣ ಮಾಡಿದರು.ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಪದಾಧಿಕಾರಿಗಳಾದ ಹೆಗ್ಗನೂರು ನಿಂಗರಾಜು, ಬಿ.ಡಿ. ಶಿವಬುದ್ದಿ, ಆರ್. ಸೋಮಣ್ಣ ಕುಪ್ಪೇಗಾಲ, ಎಸ್. ಕಲ್ಲಹಳ್ಳಿ ಕುಮಾರ್ ಮೊದಲಾದವರು ಇದ್ದರು.