ಕನ್ನಡಪ್ರಭ ವಾರ್ತೆ ರಾಮನಗರ
ಹವಾಮಾನ ವೈಪರೀತ್ಯದಿಂದಾಗಿ ಮಾವು ಬೆಳೆ ಇಳುವರಿ ಕುಂಠಿತವಾಗಿ ರೈತರು ನಷ್ಟಕ್ಕೊಳಗಾಗಿದ್ದಾರೆ. ಬೆಳೆಗಾರರಿಗೆ ಅಗತ್ಯ ಪರಿಹಾರ ನೀಡಲು ವಹಿಸಬೇಕಾದ ಕ್ರಮದ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.ಜಿಲ್ಲೆಯಲ್ಲಿ ಮಾವು ಬೆಳೆಗೆ ಕೀಟ ಬಾಧೆ, ಬೂದಿ ರೋಗ, ಜೋನಿ, ಹವಾಮಾನ ವೈಪರೀತ್ಯದಿಂದ ಹಾನಿಯಾಗಿರುವ ಬಗ್ಗೆ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್‌ನ ಪದಾಧಿಕಾರಿಗಳು ಮಾವು ಬೆಳೆಗಾರರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಮಾವು ಬೆಳೆಗೆ ಕೀಟ ಬಾಧೆ. ಬೂದಿ ರೋಗ, ಜೋನಿ, ಹವಾಮಾನ ವೈಪರೀತ್ಯದಿಂದ ಪ್ರಸಕ್ತ ಸಾಲಿನ ಬೆಳೆಯು ಕಳೆದ ಮೂರು ವರ್ಷಗಳಿಂದಲೂ ಇದೇ ರೀತಿ ಹಾನಿಗೀಡಾಗಿದ್ದು, ಮಾವು ಬೆಳೆಗಾರರಿಗೆ ತೀವ್ರ ಸ್ವರೂಪದ ಆರ್ಥಿಕ ನಷ್ಟು ಉಂಟಾಗಿದೆ. ಇದನ್ನು ಪರಿಗಣಿಸಿ ಜಿಲ್ಲಾವಾರು ಜಂಟಿ ಸಮೀಕ್ಷೆ ನಡೆಸಿ ಆಗಿರುವ ಬೆಳೆ ನಷ್ಟಕ್ಕೆ 1 ಹೆಕ್ಟೇರ್‌ಗೆ 60 ಸಾವಿರ ರು. ಗಳ ಪರಿಹಾರ ಕೊಡಬೇಕೆಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ನ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಇಷ್ಟೇ ಅಲ್ಲದೆ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲೆಯಲ್ಲಿ ಒಟ್ಟು 27,639 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದ್ದು, ಮಾವು ಬೆಳೆಯಲ್ಲಿ ಹೂವು ಬಿಡುವ ಹಾಗೂ ಕಾಯಿ ಕಚ್ಚುವ ಸಂದರ್ಭದಲ್ಲಿ ವಾತಾವರಣದ ವೈಪರೀತ್ಯದಿಂದ ಬೂದಿ ರೋಗ (Powdery Mildew), ಜೋನಿ ಕೀಟ (Plant hopper), ನುಸಿ ಕೀಟಗಳ (Thrips) ಹಾನಿಯು ಹೆಚ್ಚಾಗಿ ಕಂಡುಬಂದಿದೆ. ತೇವಾಂಶ ಕೊರತೆಯಿಂದ ಹೂವು ಒಣಗಿ ಪ್ರಸಕ್ತ ಸಾಲಿನ ಮಾವಿನ ಬೆಳೆಯು ಹಾನಿಗೊಳಗಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಮಾವು ಬೆಳೆಯ ಇಳುವರಿಯು ಕುಂಠಿತವಾಗಿ ರೈತರು ನಷ್ಟಕ್ಕೊಳಗಾಗುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ. ಆದ್ದರಿಂದ ರೈತರಿಗೆ ಅಗತ್ಯ ಪರಿಹಾರ ನೀಡಲು ವಹಿಸಬೇಕಾದ ಕ್ರಮದ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.