ಕನ್ನಡಪ್ರಭ ವಾರ್ತೆ ಕೋಲಾರ

ಬಸವ ತತ್ವಗಳ ಚರ್ಚೆಯ ಮೂಲಕ ಜಾತಿಮತಬೇಧವಿಲ್ಲದ ಸಮಾಜ ನಿರ್ಮಾಣದ ಪ್ರಯತ್ನವಾಗಿ ಬೆಂಗಳೂರು ಉತ್ತರ ವಿವಿ ಸುವರ್ಣ ಗಂಗಾ ಕ್ಯಾಂಪಾಸ್‌ನಲ್ಲಿ ಅನುಭವ ಮಂಟಪದ ಉದ್ಘಾಟನೆ ನಡೆಸಿರುವುದು ಶ್ಲಾಘನೀಯ ಕಾರ್ಯ ಎಂದು ಕೇಂದ್ರ ಬಸವ ಸಮಿತಿ ಅಧ್ಯಕ್ಷರು, ಮಾಜಿ ಉಪರಾಷ್ಟ್ರಪತಿ ಬಿಡಿ ಜತ್ತಿರ ಪುತ್ರ ಅರವಿಂದ ಜತ್ತಿ ತಿಳಿಸಿದರು.

ನಗರ ಹೊರವಲಯದ ಮಂಗಸಂದ್ರದ ಸುವರ್ಣಗಂಗಾ ಕ್ಯಾಂಪಾಸ್‌ನಲ್ಲಿ ಬೆಂಗಳೂರು ಉತ್ತರ ವಿವಿಯಿಂದ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಉದ್ಘಾಟಿಸಿ ಮಾತನಾಡಿದರು.

ಈ ಅನುಭವ ಮಂಟಪದಲ್ಲಿ ಬಸವ ತತ್ವಗಳ ಚರ್ಚೆ ನಡೆಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗಬೇಕು. ಬಸವಣ್ಣನವರ ಸ್ಮರಣೆ ಜತೆಗೆ ಜಾತಿ, ಧರ್ಮ, ಕುಲ, ಮತಬೇಧವಿಲ್ಲದ ಮನಸ್ಥಿತಿ ಬಲಗೊಳ್ಳಬೇಕು ಎಂದು ಕರೆ ನೀಡಿದರು.

ದೇಹ, ಮನಸ್ಸು, ಆತ್ಮದ ನಡುವಿನ ಸೂಕ್ಷ್ಮ ತತ್ವಗಳನ್ನು ಅರಿತುಕೊಲ್ಳಬೇಕು. ಬಸವಣ್ಣನವರು ಹೇಳಿದಂತೆ ನಾವು ದೇವರನ್ನು ದೇವಾಲಯ, ಚರ್ಚ್, ಮಸೀದಿಗಳಲ್ಲಿ ಹುಡುಕುವ ಅಗತ್ಯವಿಲ್ಲ. ನಮ್ಮನ್ನು ನಾವೇ ಅರಿತರೆ ಅದೇ ದೈವತ್ವ ಎಂದು ಹೇಳಿದರು.


ದಮನಿತರ ಧ್ವನಿಯಾಗಿದ್ದ ಬಸವಣ್ಣನವರ ಅನುಭವ ಮಂಟಪದ ಈ ವೇದಿಕೆ ದೇಶದ ಗಮನ ಸೆಳೆಯಬೇಕು. ವಿದ್ಯಾರ್ಥಿಗಳು ವ್ಯಕ್ತಗತವಾಗಿ ತಮ್ಮ ಧ್ವನಿ ಏನು ಎಂಬುದನ್ನು ಅರಿಯಬೇಕು. ಅಸ್ಪೃಶ್ಯತೆಗೆ ತಿಲಾಂಜಲಿ ಇಡಬೇಕು, ಸ್ತ್ರೀ ಸಮಾನತೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿ ಬಸವ ಬೀಜವನ್ನು ಭಿತ್ತಿದ್ದೀರಿ. ಇದು ನಿಮ್ಮ ಬದಲಾವಣೆಯ ಮಾರ್ಗ, ನಿಮ್ಮೊಳಗಿನ ಆತ್ಮ ಚೈತನ್ಯವನ್ನು ಅರಿವಾಗಿಟ್ಟುಕೊಂಡು ಬದುಕು ಸಾಗಿಸಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮ ಸಮಾಜದ ತಳಹದಿಯ ಬುನಾದಿ ಹಾಕಿಕೊಟ್ಟವರು. ಜನಸಾಮಾನ್ಯರಿಗೆ ಸಂದೇಶಗಳನ್ನು ವಚನಗಳ ಮೂಲಕ ತಲುಪಿಸಿದರು ಎಂದು ತಿಳಿಸಿದರು.

ಬಸವಣ್ಣನವರ ವಚನಗಳಾದ ಉಳ್ಳವರು ಶಿವಾಲಯ ಮಾಡುವರು ಮತ್ತು ಕಾಯಕವೇ ಕೈಲಾಸ ಮತ್ತಿತರ ತತ್ವಗಳ ಮಹತ್ವ ಸಮಾಜಕ್ಕೆ ಬೆಳಕು ನೀಡಿದೆ ಎಂದ ಅವರು, ಬಸವಣ್ಣನವರು ಸಾಮಾನಿಕ, ಆರ್ಥಿಕ,ರಾಜಕೀಯ ಬದಲಾವಣೆಗೆ ಅಡಿಪಾಯ ಹಾಕಿಕೊಟ್ಟ ಮಹಾಪುರುಷರು ಎಂದು ತಿಳಿಸಿದರು.

ಅನುಭವ ಮಂಟಪ ವೇದಿಕೆಯನ್ನು ಬಳಸಿಕೊಂಡು ಚರ್ಚೆಗಳ ಮೂಲಕ ಬಸವ ತತ್ವಗಳ ಮಹತ್ವ ಅರಿತು ಸಮ ಸಮಾಜದ ನಿರ್ಮಾಣಕ್ಕೆ ನೆರವಾಗಬೇಕು, ನಮ್ಮ ನಡುವಿನ ದ್ವೇಷ, ಅಸೂಯೆ ಕೊನೆಗೊಳ್ಳಬೇಕು. ಉಪನ್ಯಾಸಕರು, ವಿದ್ಯಾರ್ಥಿಗಳ ನಡುವೆ ಚರ್ಚೆಯ ವಿಷಯಗಳ ವಿನಿಯಮವಾಗಬೇಕು. ಒಟ್ಟಾರೆ ಜ್ಞಾನಾರ್ಜನೆಗೆ ಈ ವೇದಿಕೆ ಬಳಕೆಯಾಗಲಿ ಎಂದು ತಿಳಿಸಿದರು.

ಅರವಿಂದ ಜತ್ತಿಯವರ ಬಸವ ತತ್ವಗಳ ಪ್ರಚಾರಕ್ಕೆ ನಡೆಸಿರುವ ಪ್ರಾಮಾಣಿಕ ಪ್ರಯತ್ನದ ಕುರಿತು ಕುಲಪತಿಗಳು ಶ್ಲಾಘಿಸಿ, ಅವರ ಪ್ರಯತ್ನ ಸಮ ಸಮಾಜಕ್ಕೆ ಕಾರಣವಾಗಲಿ ಎಂದು ಹೇಳಿದರು.

ಉತ್ತರ ವಿವಿಯ ಮೌಲ್ಯಮಾಪನ ಕುಲಸಚಿವ ಲೋಕನಾಥ್, ಅರವಿಂದ ಜತ್ತಿಯವರ ಸರಳ, ಸಜ್ಜನಿಕೆ ಮತ್ತು ಉತ್ಸಾಹ, ಚೈತನ್ಯ ಚಿಲುಮೆಗೆ ಅವರ ಬಸವತತ್ವ ಪಾಲನೆ ಮತ್ತು ಅಂತರಂಗ, ಬಹಿರಂಗ ಶುದ್ದಿಯೇ ಕಾರಣ ಎಂದು ಹೇಳಿದರು.

೬ನೇ ಶತಮಾನದಲ್ಲಿ ಬುದ್ಧನ ಶಾಂತಿ ಮಂತ್ರ, ಅದೇ ದಾರಿಯಲ್ಲಿ ೧೨ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ಪದ್ಧತಿ ವಿರುದ್ದ ಧ್ವನಿಯೆತ್ತುವ ಮೂಲಕ ಪಂಚಭೂತಗಳು ಯಾರ ಸ್ವತ್ತಲ್ಲ ಎಂದು ಪ್ರತಿಪಾದಿಸಿದರು ಎಂದು ಹೇಳಿದರು.

ಉತ್ತರ ವಿವಿ ವಿತ್ತಾಧಿಕಾರಿ ವಸಂತಕುಮಾರ್ ಮಾತನಾಡಿ, ಅರವಿಂದ ಜತ್ತಿಯವರು ಬಸವಣ್ಣನವರ ತತ್ವಗಳ ಪ್ರಚಾರಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ, ಅವರ ಪ್ರಯತ್ನದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತಿದೆ ಎಂದು ತಿಳಿಸಿದರು.

ಸಿಂಡಿಕೇಟ್ ಸದಸ್ಯ ಗೋಪಾಲಗೌಡ ಮಾತನಾಡಿ, ಕೋಲಾರದ ಮಣ್ಣು ದೇಶಕ್ಕೆ ಮಹಾನ್ ವ್ಯಕ್ತಿಗಲನ್ನು ಕೊಡುಗೆಯಾಗಿ ನೀಡಿದೆ, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರವನ್ನು ಆಯ್ಕೆಮಾಡಿಕೊಮಡರೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಬಸವಣ್ಣ, ಬುದ್ದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಡಳಿತ ಕುಲಸಚಿವ ಸಿ.ಎನ್.ಶ್ರೀಧರ್, ಸುವರ್ಣಗಂಗೆ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಕುಮುದಾ, ಪಿ.ಎಂ.ಉಷಾ ನೋಡಲ್ ಅಧಿಕಾರಿ ರಮೇಶ್, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ರಾಜಶೇಖರ್,ಲೋಕೇಶ್, ಬಸವರಾಜ್,ರಾಮಚಂದ್ರಪ್ಪ, ಮುನಿಶಾಮಿಗೌಡ ಮತ್ತಿತರಿದ್ದರು.

ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಪ್ರೊ.ವಿಶ್ವನಾಥ್ ಕವನ ವಾಚಿಸಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಸಿ.ಎಸ್.ಶ್ರೀಲತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ನಂದಶ್ರೀ ಸ್ವಾಗತಿಸಿ, ಡಾ.ಗಾಯತ್ರಿದೇವಿ ಅತಿಥಿಗಳ ಪರಿಚಯ ಮಾಡಿಕೊಟ್ಟರು.