ಸಾರಾಂಶ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಲ ಮಗಳನ್ನು ಉಸಿರುಗಟ್ಟಿಸಿ ಕೊಂದು ತಂದೆ ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮಸಂದ್ರ ಸಮೀಪದ ಕನ್ನಿಕಾ ಬಡಾವಣೆ ನಿವಾಸಿ ಸಿರಿ (7) ಮೃತ ದುರ್ದೈವಿ
ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಲ ಮಗಳನ್ನು ಉಸಿರುಗಟ್ಟಿಸಿ ಕೊಂದು ತಂದೆ ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮಸಂದ್ರ ಸಮೀಪದ ಕನ್ನಿಕಾ ಬಡಾವಣೆ ನಿವಾಸಿ ಸಿರಿ (7) ಮೃತ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತಳ ಮಲ ತಂದೆ ದರ್ಶನ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶುಕ್ರವಾರ ಸಂಜೆ ಶಾಲೆಯಿಂದ ಮನೆಗೆ ಮರಳಿದ ಬಳಿಕ ಮಗಳ ಮೇಲೆ ಹಲ್ಲೆ ಮಾಡಿ ಉಸಿರುಗಟ್ಟಿಸಿ ದರ್ಶನ್ ಹತ್ಯೆಗೈದಿದ್ದಾನೆ. ಕೆಲ ಹೊತ್ತಿನ ಬಳಿಕ ಪತ್ನಿ ಮನೆಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಂ ಲವ್ ಸ್ಟೋರಿ:
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಮೊದಲ ಪತಿಯಿಂದ ಪ್ರತ್ಯೇಕವಾಗಿ ಶಿಲ್ಪಾ, ರಾಮಸಂದ್ರದ ಕನ್ನಿಕಾ ಬಡಾವಣೆಯಲ್ಲಿ ತನ್ನ ತಾಯಿ ಹಾಗೂ ಮಗಳ ಜತೆ ವಾಸವಾಗಿದ್ದರು. ನಾಲ್ಕು ತಿಂಗಳ ಹಿಂದೆ ಆಕೆಗೆ ಇನ್‌ಸ್ಟಾಗ್ರಾಂನಲ್ಲಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದರ್ಶನ್ ಪರಿಚಯವಾಗಿದೆ. ಆನೇಕಲ್ ಸಮೀಪದ ದಿನಸಿ ಅಂಗಡಿಯಲ್ಲಿ ಆತ ಕೆಲಸ ಮಾಡುತ್ತಿದ್ದ. ಇನ್‌ಸ್ಟಾಗ್ರಾಂ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿದೆ. ಈ ವಿಚಾರ ತಿಳಿದ ಶಿಲ್ಪಾ ಅವರ ತಾಯಿ, ನಿನಗೆ ಇನ್ನು ಚಿಕ್ಕ ವಯಸ್ಸು ಎರಡನೇ ಮದುವೆ ಮಾಡಿಕೋ. ನಿನ್ನ ಬದುಕಿಗೆ ಆಸರೆಯಾಗುತ್ತದೆ ಎಂದು ಸಲಹೆ ನೀಡಿದ್ದರು. ಅಂತೆಯೇ ನಾಲ್ಕು ತಿಂಗಳ ಹಿಂದೆ ತನಗಿಂತ ವಯಸ್ಸಿನಲ್ಲಿ ಎಂಟು ವರ್ಷ ಕಿರಿಯನಾದ ದರ್ಶನ್ ಜತೆ ಶಿಲ್ಪಾ ಎರಡನೇ ವಿವಾಹವಾಗಿದ್ದಳು.
ತಾಯಿ ಮೃತಪಟ್ಟ ಬಳಿಕ ಆತನ ವರಸೆ ಬದಲಾಯಿತು
ಮದುವೆ ನಂತರ ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಇತ್ತೀಚೆಗೆ ಅನಾರೋಗ್ಯದಿಂದ ಶಿಲ್ಪಾಳ ತಾಯಿ ಮೃತಪಟ್ಟ ಬಳಿಕ ಆತನ ವರಸೆ ಬದಲಾಯಿತು. ಸಣ್ಣಪುಟ್ಟ ಕಾರಣಗಳಿಗೆ ಪತ್ನಿ ಹಾಗೂ ಮಲ ಮಗಳ ಮೇಲೆ ದರ್ಶನ್ ಗಲಾಟೆ ಮಾಡುತ್ತಿದ್ದ. ಮಗುವಿನ ಮೇಲೆ ತನ್ನ ಕ್ರೌರ್ಯ ತೋರಿಸುತ್ತಿದ್ದ. ಶುಕ್ರವಾರ ಸಂಜೆ ಮನೆಯಲ್ಲಿ ಸರಿಯಾಗಿ ಟ್ಯೂಷನ್ ಗೆ ಹೋಗುವುದಿಲ್ಲ ಎಂದು ಕಾರಣ ನೀಡಿ ಮಗಳ ಮೇಲೆ ದರ್ಶನ್ ಹಲ್ಲೆ ಮಾಡಿ ಆಕೆಯ ಉಸಿರುಗಟ್ಟಿಸಿ ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))