ಸಾರಾಂಶ
ಚೆನ್ನೈ: ಫಿಸಿಯೋಥೆರಫಿಸ್ಟ್ ಆಗಿರುವ 49 ವರ್ಷದ ಅಮ್ಮ ಹಾಗೂ ಆಕೆಯ ಮಗಳು, ಇಬ್ಬರೂ ಒಟ್ಟಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆಯಾಗಿರುವ ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಾಯಿ ಅಮುತವಲ್ಲಿ ಮಣಿವಣ್ಣನ್ 147 ಹಾಗೂ ಮಗಳು ಎಂ. ಸಂಯುಕ್ತಾ 450 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ. ತಾಯಿಗೆ ಅಂಗವೈಕಲ್ಯ ಮೀಸಲಾತಿಯಡಿ ತಮ್ಮದೇ ಜಿಲ್ಲೆಯ ವಿರುಧನಗರ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ದೊರಕಿದೆ. ಅವರ ಶಾಲಾ ಶಿಕ್ಷಣ ಪೂರ್ಣಗೊಂಡು 3 ದಶಕಗಳಾಗಿವೆ. ಆಗ ವೈದ್ಯಕೀಯ ಕೋರ್ಸ್‌ಗೆ ಸೀಟು ಸಿಗದ ಕಾರಣ ಫಿಸಿಯೋಥೆರಫಿಸ್ಟ್ ಆಗಿದ್ದರು.
‘ನನ್ನ ಶಾಲಾ ದಿನಗಳ ಪಠ್ಯಕ್ಕೂ ಈಗಿನ ಪಠ್ಯಕ್ಕೂ ಬಹಳ ವ್ಯತ್ಯಾಸವಿದೆ. ಈಗಿನದು ಬಹಳ ಕಠಿಣ. ನನ್ನ ಮಗಳು ನೀಟ್‌ಗೆ ತಯಾರಿ ನಡೆಸುವುದನ್ನು ನೋಡಿದ ನಂತರ ನನ್ನ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು. ಅವಳೇ ನನಗೆ ಸ್ಫೂರ್ತಿಯಾದಳು. ಅವಳ ಪುಸ್ತಕವನ್ನು ಪಡೆದು ಓದಲು ಪ್ರಾರಂಭಿಸಿದೆ’ ಎಂದು ಅಮುತವಲ್ಲಿ ಹೇಳಿದ್ದಾರೆ.
‘ಅಮ್ಮ ಕಲಿಯುವ ಕಾಲೇಜಿನಲ್ಲೇ ಕಲಿಯಲು ನನಗೆ ಇಷ್ಟವಿಲ್ಲ. ಹೊರರಾಜ್ಯದಲ್ಲಿ, ಮೀಸಲಾತಿ ಇಲ್ಲದೇ ಸಾಮಾನ್ಯಳಾಗಿ ಸೀಟ್ ಪಡೆಯಬೇಕು ಎಂಬುದು ನನ್ನ ಹಂಬಲ’ ಎಂದು ಮಗಳು ಸಂಯುಕ್ತಾ ತಿಳಿಸಿದ್ದಾರೆ.