ನನ್ನ ಹುಳುಕು ಬಿಚ್ಚಿಡು, ನಿನ್ನದ್ದನ್ನುನಾನು ಬಹಿರಂಗ ಪಡಿಸುವೆ: ಡಿಕೆಶಿ

| N/A | Published : Oct 26 2025, 02:00 AM IST / Updated: Oct 26 2025, 06:43 AM IST

DK Shivakumar
ನನ್ನ ಹುಳುಕು ಬಿಚ್ಚಿಡು, ನಿನ್ನದ್ದನ್ನುನಾನು ಬಹಿರಂಗ ಪಡಿಸುವೆ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

‘ಅವರು ನನ್ನ ಯಾವ ವಿಚಾರ ಬಿಚ್ಚಿಡುತ್ತಾರೋ ಬಿಚ್ಚಿಡಲಿ. ಅವರ ಬಳಿಯೇ ಕೇಂದ್ರ ಸರ್ಕಾರ ಇದೆಯಲ್ಲ. ಇದಕ್ಕೆಲ್ಲ ನಾನು ಹೆದರುವ ಮಗ ಅಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

  ಬೆಂಗಳೂರು :  ‘ಅವರು ನನ್ನ ಯಾವ ವಿಚಾರ ಬಿಚ್ಚಿಡುತ್ತಾರೋ ಬಿಚ್ಚಿಡಲಿ. ಅವರ ಬಳಿಯೇ ಕೇಂದ್ರ ಸರ್ಕಾರ ಇದೆಯಲ್ಲ. ಇದಕ್ಕೆಲ್ಲ ನಾನು ಹೆದರುವ ಮಗ ಅಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

‘ಹಿಟ್ ಆ್ಯಂಡ್‌ ರನ್, ಬ್ಲ್ಯಾಕ್ ಮೇಲ್ ಮಾಡುವುದಲ್ಲ. ನನ್ನ ವಿರುದ್ಧ ಇರುವ ದಾಖಲೆ ತಂದು ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ, ವಾದ ವಿವಾದ ಇರಬೇಕು’ ಎಂದೂ ಸವಾಲು ಎಸೆದಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಬಳಿ ಸಾಕ್ಷಿಗುಡ್ಡೆ ಇದ್ದರೆ, ಜನಕ್ಕೆ, ರಾಜ್ಯಕ್ಕೆ ಒಳ್ಳೆಯದು ಮಾಡಿದ್ದರೆ ಅದನ್ನು ದಾಖಲೆ ಸಮೇತ ಹೇಳಿ ಎಂದರು.

ಜನ ಅವರಿಗೆ ಮತ ಕೊಟ್ಟು ದೊಡ್ಡ ಹುದ್ದೆ ನೀಡಿದ್ದಾರೆ

ಜನ ಅವರಿಗೆ ಮತ ಕೊಟ್ಟು ದೊಡ್ಡ ಹುದ್ದೆ ನೀಡಿದ್ದಾರೆ. ಸಾರ್ವಜನಿಕವಾಗಿ ಬಂದು ಉತ್ತರ ನೀಡಲಿ. ಕೇವಲ ಸುಳ್ಳು ಆರೋಪ ಮಾಡುತ್ತಾ, ಬೇರೆಯವರಿಗೆ ಹೆದರಿಸುತ್ತಾ ಹೋಗುವುದಲ್ಲ. ಜೇಬಿನಿಂದ ಪೆನ್ ಡ್ರೈವ್ ತೆಗೆಯುತ್ತೇನೆ, ತೆಗೆಯುತ್ತೇನೆ ಎಂದು ಹೇಳಿದಂತೆ ಅಲ್ಲ. ಬಹಿರಂಗ ಚರ್ಚೆಗೆ ಬರಲಿ. ಇದರಲ್ಲಿ ಅವಮಾನ ಆಗುವಂಥದ್ದು ಏನೂ ಇಲ್ಲ. ಅವರು ಸಿಎಂ ಆಗಿದ್ದಾಗ ನಾನು ಸಾತನೂರಿಗೆ ಚರ್ಚೆಗೆ ಹೋಗಲಿಲ್ಲವೇ? ನಾನು ಏನು ಮಾಡಿದ್ದೇನೆ? ನನ್ನ ಹುಳುಕು ಏನಿದೆ? ಎಂಬುದನ್ನು ನೀನು ಹೇಳು. ನಿನ್ನದು ಏನಿದೆ ಎಂದು ನಾನು ಹೇಳುತ್ತೇನೆ. ಅದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಏಕವಚನದಲ್ಲಿ ಸವಾಲು ಹಾಕಿದರು.

ಎರಡೂವರೆ ವರ್ಷಗಳ ನಂತರ ನಮ್ಮ ಸರ್ಕಾರ ಬರುತ್ತದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ, ಈ ಡೈಲಾಗ್ ಎಷ್ಟು ಸಾರಿ ಹೇಳಿ ಆಗಿದೆ. ನನಗೂ ಕೇಳಿ, ಕೇಳಿ ಸಾಕಾಗಿದೆ. ಇವರ ನಾಯಕತ್ವದಲ್ಲಿ ಪಕ್ಷ 18 ಸ್ಥಾನಕ್ಕೆ ಇಳಿದಿದೆ. ಮುಂದಿನ ಬಾರಿ 8-9 ಸ್ಥಾನಗಳಿಗೆ ಕುಸಿಯಲಿದೆ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಅವರೇ ಪಟ್ಟಿ ನೀಡಲಿ:

ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಎಲ್ಲಿ ಕೈಗಾರಿಕೆ ತರುತ್ತಾರೆ ಎಂದು ಹೇಳಲಿ, ಅಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾಡೋಣ. ಕುಮಾರಸ್ವಾಮಿ ಕೈಗಾರಿಕೆ ತರುತ್ತೇನೆ ಎನ್ನುತ್ತಾರಲ್ಲ, ತರಲಿ. ರಾಮನಗರದಲ್ಲಿ ಕೈಗಾರಿಕೆ ಮಾಡುತ್ತಾರೋ, ಬಿಡದಿಯಲ್ಲಿ ಮಾಡುತ್ತಾರೋ, ಮಂಡ್ಯದಲ್ಲಿ ಮಾಡುತ್ತಾರೋ ಎಲ್ಲಿ ಮಾಡುತ್ತಾರೆ ಎಂದು ಅವರೇ ಪಟ್ಟಿ ನೀಡಲಿ. ಅಗತ್ಯ ಭೂಮಿ ಬಗ್ಗೆ ಅರ್ಜಿ ಹಾಕಲಿ. ಸುಮ್ಮನೆ ಖಾಲಿ ಮಾತಾಡಿದರೆ ಯಾರೂ ಒಪ್ಪುವುದಿಲ್ಲ ಎಂದರು.

ಖಾತಾ ಪರಿವರ್ತನೆ ಹೆಸರಿನಲ್ಲಿ ಭ್ರಷ್ಟಾಚಾರ ಎಂಬ ಜೆಡಿಎಸ್ ಆರೋಪಕ್ಕೆ ಪ್ರಕ್ರಿಯೆ ನೀಡಿದ ಅವರು, ಖಾತಾ ವಿಚಾರದಲ್ಲಿ ಯಾವ ಭ್ರಷ್ಟಾಚಾರ ನಡೆಯುತ್ತಿದೆ? ಬೆಂಗಳೂರು ನಾಗರಿಕರ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಲು, ಅವರಿಗೆ ಮುಂದೆ ಬ್ಯಾಂಕ್ ಸಾಲ ಹಾಗೂ ಇತರೆ ಸೌಲಭ್ಯ ಸಿಗಬೇಕು. ಜನರಿಗೆ ಉತ್ತಮ ಸೌಕರ್ಯ ಒದಗಿಸಬೇಕು, ಜನ ತೆರಿಗೆ ಪಾವತಿಸುವಂತಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಮಾಡುತ್ತಿದ್ದೇವೆ. ಜನರ ಆಸ್ತಿ ದಾಖಲೆ ಸರಿಪಡಿಸುವುದು ಸರ್ಕಾರದ ಆರನೇ ಗ್ಯಾರಂಟಿ ಆಗಿದೆ. ಈ ಕಾರ್ಯವನ್ನು ದೇಶದ ಯಾವುದೇ ನಗರದಲ್ಲಿ ಮಾಡಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಸಾವಿರಾರು ಜನ ಅರ್ಜಿ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಏಕೆ ಆಸ್ತಿ ದಾಖಲೆಗಳ ಡಿಜಿಟಲೀಕರಣ ಮಾಡಲಿಲ್ಲ? ಈ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಕರೆಯುತ್ತಲೇ ಇದ್ದೇನೆ ಎಂದರು.

Read more Articles on