ರಾಜ್ಯ ಸರ್ಕಾರದಿಂದ ರಾಜಕೀಯ ಅಸೂಯೆ, ಹೆಜ್ಜೆ ಹೆಜ್ಜೆಗೂ ಅಡ್ಡಿ: ಎಚ್.ಡಿ.ಕುಮಾರಸ್ವಾಮಿ

| Published : Apr 08 2025, 12:31 AM IST

ರಾಜ್ಯ ಸರ್ಕಾರದಿಂದ ರಾಜಕೀಯ ಅಸೂಯೆ, ಹೆಜ್ಜೆ ಹೆಜ್ಜೆಗೂ ಅಡ್ಡಿ: ಎಚ್.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆ ರಾಜ್ಯದ ಹೆಮ್ಮೆ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತವಾದ ಮೇಲೆ ಬಳ್ಳಾರಿಯ ಸಂಡೂರಿನ ದೇವದಾರಿಯಲ್ಲಿ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಹಣ ಪಡೆದು ಅನುಮತಿ ನೀಡಿತ್ತು.

ಕನ್ನಡಪ್ರಭ ವಾರ್ತೆ ಹಲಗೂರು

ರಾಜಕೀಯ ಅಸೂಯೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಜ್ಜೆ ಹೆಜ್ಜೆಗೂ ನನಗೆ ಅಡ್ಡಿಪಡಿಸುತ್ತಿದೆ. ರಾಜ್ಯದಲ್ಲಿ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಹಂಡನಹಳ್ಳಿಯಲ್ಲಿ ಶ್ರೀಸಿದ್ಧಿ ವಿನಾಯಕ ದೇವರು ಹಾಗೂ ನಾಗದೇವತೆಗಳ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳ ಭಾಗಕ್ಕೆ ಒಂದೆರೆಡು ಕೈಗಾರಿಕೆ ಕಾರ್ಖಾನೆ ತರಬೇಕು ಎಂದು ಸಾಕಷ್ಟು ಶ್ರಮ ಹಾಕುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರ ನನಗೆ ಬೆಂಬಲ ಕೊಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆ ರಾಜ್ಯದ ಹೆಮ್ಮೆ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತವಾದ ಮೇಲೆ ಬಳ್ಳಾರಿಯ ಸಂಡೂರಿನ ದೇವದಾರಿಯಲ್ಲಿ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಹಣ ಪಡೆದು ಅನುಮತಿ ನೀಡಿತ್ತು. ಗಣಿ ಹಂಚಿಕೆ ಮಾಡಲು ಕೋಟಿಗಟ್ಟಲೆ ಹಣ ಪಡೆದು ಅನೇಕ ವರ್ಷವಾದರೂ ಗಣಿ ಮಾಡಿಲ್ಲ. ಅಲ್ಲಿ ಗಣಿಗಾರಿಕೆ ಮಾಡದ ಹೊರತು ಕಾರ್ಖಾನೆಗೆ ಅದಿರು ಸಿಗದಂತಾಯಿತು ಎಂದು ದೂರಿದರು.

ನಾನು ಕೇಂದ್ರ ಉಕ್ಕು ಸಚಿವನಾದ ಕೂಡಲೇ ಸಚಿವಾಲಯದ ಅಧಿಕಾರಿಗಳು ಈ ವಿಷಯವನ್ನು ನನ್ನ ಗಮನಕ್ಕೆ ತಂದು ರಾಜ್ಯ ಸರ್ಕಾರ ಅಡ್ಡಿ ಮಾಡುತ್ತಿರುವ ಬಗ್ಗೆ ತಿಳಿಸಿದರು. ಅಲ್ಲದೇ, ಕುದುರೆಮುಖ ಕಂಪನಿಗೆ ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಡಲು ಹಣದ ಅವಶ್ಯಕತೆ ಇತ್ತು. 1,700 ಕೋಟಿ ರು. ಮೊತ್ತದ ಹಣಕಾಸು ನೆರವು ಕೊಡುವ ಪ್ರಸ್ತಾವನೆ ವಿತ್ತ ಸಚಿವಾಲಯಕ್ಕೆ ಹೋಗುವ ಕಡತಕ್ಕೆ ಸಹಿ ಹಾಕಿದೆ ಎಂದರು.

ಉಕ್ಕು ಸಚಿವನಾಗಿ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಮೊತ್ತ ಮೊದಲ ಸಹಿಯನ್ನು ನಾನು ಹಾಕಿದೆ. ರಾಜಕೀಯವಾಗಿ ನನ್ನ ವಿರುದ್ಧ ಅಸೂಯೆ ಪಡುತ್ತಿರುವ ರಾಜ್ಯ ಸರ್ಕಾರ ಅದಕ್ಕೆ ಅಡ್ಡಿಪಡಿಸಿತು. ಮಂಗಳೂರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎರಡು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡರು ಎಂದರು.

ಕೊನೆಗೆ ಇವರ ಹಿತ, ರಾಜ್ಯದ ಹಿತಕ್ಕಾಗಿ ನಾನು ಕುದುರೆಮುಖ ಸಂಸ್ಥೆಯನ್ನು ರಾಷ್ಟ್ರೀಯ ಖನಿಜಾವೃದ್ಧಿ ನಿಗಮ (ಎನ್ ಎಂಡಿಸಿ) ವಿಲೀನ ಮಾಡುವ ನಿರ್ಧಾರ ಕೈಗೊಂಡೆ. ಅದೇ ರೀತಿ ಎಚ್‌ಎಂಟಿ ಅಭಿವೃದ್ಧಿ ವಿಷಯದಲ್ಲಿಯೂ ಸರ್ಕಾರ ರಾಜಕೀಯ ಮಾಡುತ್ತ ಅಡ್ಡಗಾಲು ಹಾಕುತ್ತಿದೆ ಎಂದು ಕಿಡಿಕಾರಿದರು.

ನೆರೆಯ ರಾಜ್ಯಗಳಿಂದ ಸಹಕಾರ:

ಆಂಧ್ರದ ವೈಜಾಗ್ ಸ್ಟೀಲ್ ಉದಾಹರಣೆ ಕೊಟ್ಟ ಎಚ್ಡಿಕೆ, ಚಂದ್ರಬಾಬು ನಾಯ್ಡು ಅವರು ಈ ಕಾರ್ಖಾನೆಯನ್ನು ಪುನಶ್ಚೇತನ ಮಾಡುವ ಉದ್ದೇಶದಿಂದ ಅನೇಕ ಸಲ ನನ್ನನ್ನು ಭೇಟಿಯಾದರು. ಅನೇಕ ಸಭೆಗಳಿಗೆ ಬಂದರು. ಆ ರಾಜ್ಯದ ನಾಯಕರು ಪಕ್ಷಾತೀತವಾಗಿ ನನಗೆ ಬೇಡಿಕೆ ಇಟ್ಟರು. ಅವರ ಬದ್ಧತೆ ನಮ್ಮ ಸರ್ಕಾರಕ್ಕೆ ಏಕಿಲ್ಲ ಎಂದು ಪ್ರಶ್ನಿಸಿದರು.

ಆಂಧ್ರ ಸೇರಿ ಹಲವು ರಾಜ್ಯಗಳು ಅಭಿವೃದ್ಧಿಗಾಗಿ ನನಗೆ ಕೈಜೋಡಿಸಿವೆ. ಆದರೆ, ನಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ರಾಜಕೀಯ ಬೆರೆಸುವುದು ಎಷ್ಟು ಸರಿ? ಇದರಿಂದ ಯಾರಿಗೆ ನಷ್ಟ?, ಯುವ ಜನರಿಗೆ ಉದ್ಯೋಗ ದೊರೆಯುತ್ತಿಲ್ಲ. ಅದಕ್ಕೆ ಹೊಣೆ ಯಾರು?. ಅಭಿವೃದ್ಧಿಯಲ್ಲಿ ಕೂಡ ರಾಜ್ಯ ಸರಕಾರ ರಾಜಕೀಯ ಮಾಡುತ್ತಿದೆ. ತಮ್ಮ ರಾಜಕೀಯ ವಿರೋಧಿಗಳಿಗೆ ಸಹಕಾರ ನೀಡುವುದು ಇರಲಿ, ಅವರ ಒಳ್ಳೆಯ ಕೆಲಸಗಳನ್ನು ಬೆಂಬಲಿಸುವ ಕೆಲಸವನ್ನು ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.