ಗಂಡನ ಮನೆಯವರ ಹಿಂಸೆ ತಾಳಲಾರದೆ ಮಗಳು ಆತ್ಮಹತ್ಯೆ: ಪೋಷಕರ ಆರೋಪ

| Published : Jul 26 2025, 12:00 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕು ಬಲ್ಲೇನಹಳ್ಳಿ ಗ್ರಾಮದ ಪೂಜಾ (೨೫) ಮೃತ ಯುವತಿ. ಗಂಡ ಅಭಿನಂದನ್ ಈಕೆಯನ್ನು ಕೊಲೆ ಮಾಡಿ ನೇತು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿರುವುದಾಗಿ ಯುವತಿಯ ಪೋಷಕರು ಆರೋಪಿಸಿದ್ದಾರೆ. ಸದ್ಯ ಮೃತ ಪೂಜಾಳ ಪತಿ ಅಭಿನಂದನ್ ಹಾಗೂ ಆತನ ಸಹೋದರ ಅನಿಲ್‌ಕುಮಾರ್ ಪೊಲೀಸರಿಗೆ ಶರಣಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎರಡು ತಿಂಗಳ ಹಿಂದೆಯಷ್ಟೇ ಯುವತಿಯೊಬ್ಬಳನ್ನು ಅಪಹರಿಸಿ ಬಲವಂತದಿಂದ ಮದುವೆಯಾಗಿ ವರದಕ್ಷಿಣೆ ಹಣ ತರುವಂತೆ ಗಂಡನ ಮನೆಯವರು ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಯುವತಿಯ ಕಡೆಯವರು ಶುಕ್ರವಾರ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಾಂಡವಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕು ಬಲ್ಲೇನಹಳ್ಳಿ ಗ್ರಾಮದ ಪೂಜಾ (೨೫) ಮೃತ ಯುವತಿ. ಗಂಡ ಅಭಿನಂದನ್ ಈಕೆಯನ್ನು ಕೊಲೆ ಮಾಡಿ ನೇತು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿರುವುದಾಗಿ ಯುವತಿಯ ಪೋಷಕರು ಆರೋಪಿಸಿದ್ದಾರೆ. ಸದ್ಯ ಮೃತ ಪೂಜಾಳ ಪತಿ ಅಭಿನಂದನ್ ಹಾಗೂ ಆತನ ಸಹೋದರ ಅನಿಲ್‌ಕುಮಾರ್ ಪೊಲೀಸರಿಗೆ ಶರಣಾಗಿದ್ದಾರೆ.

ಪೂಜಾ ಬಿಎಸ್ಸಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಖಾಸಗಿ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಕಳೆದ ೬ ತಿಂಗಳಿಂದ ವರ್ಕ್ ಫ್ರಮ್ ಹೋಮ್ ಕೆಲಸವಿದ್ದ ಕಾರಣ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ದೊಡ್ಡಮ್ಮನ ಮನೆಯಲ್ಲಿ ಇದ್ದುಕೊಂಡು ವರ್ಕ್‌ಫ್ರಮ್ ಹೋಮ್ ಕೆಲಸ ಮಾಡಿಕೊಂಡಿದ್ದಳು.

ಕೆನ್ನಾಳು ಗ್ರಾಮದ ಮೂಡಲಕೇರಿ ಬೀದಿಯ ಅಭಿನಂದನ್ ಎಂಬಾತ ಪೂಜಾಳನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಪ್ರೀತಿಸುವುದಾಗಿ ಹೇಳಿ ಹಿಂಬಾಲಿಸುತ್ತಿದ್ದನು. ಈ ವಿಷಯವನ್ನು ಪೂಜಾ ತನ್ನ ತಂದೆ- ತಾಯಿಗೆ ತಿಳಿಸಿದ್ದಳು. ನಂತರ ಅಭಿನಂದನ್‌ನನ್ನು ಕರೆಸಿ ಯುವತಿಯ ಕಡೆಯವರು ಆಕೆಗೆ ತೊಂದರೆ ನೀಡದಂತೆ ಬುದ್ಧಿವಾದ ಹೇಳಿ ಕಳಿಸಿದ್ದರು.

ಈ ಮಧ್ಯೆ ಕಳೆದ ಮೇ ೨೧ರಂದು ಸಂಜೆ ೫ ಗಂಟೆ ಸಮಯದಲ್ಲಿ ಪೂಜಾ ಕೆನ್ನಾಳು ಗ್ರಾಮದ ಸೊಸೈಟಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದು ಬಲವಂತವಾಗಿ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದನು ಎಂದು ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯಾದ ಬಳಿಕ ಪೂಜಾ ಮತ್ತು ಅಭಿನಂದನ್ ಕಾಣದಿದ್ದಾಗ ಶ್ರೀರಂಗಪಟ್ಟಣ ಪೊಲೀಸರಿಗೆ ಮೇ ೩೧ರಂದು ದೂರು ನೀಡಿದ್ದೆವು. ಪೊಲೀಸರು ಅವರನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿದಾಗ ಅಭಿನಂದನ್ ಪೂಜಾಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿ ಕೆನ್ನಾಳು ಗ್ರಾಮದ ಅವರ ಮನೆಗೆ ಕರೆದುಕೊಂಡು ಹೋಗಿದ್ದನು. ಇದಾದ ಒಂದು ತಿಂಗಳ ಬಳಿಕ ಗಂಡ ಮತ್ತು ಆತನ ಮನೆಯವರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಅಪ್ಪನ ಮನೆಗೆ ಹೋಗಿ ಹಣ ತೆಗೆದುಕೊಂಡು ಬಾ, ಇಲ್ಲವಾದರೆ ನೀನು ನಮ್ಮ ಮನೆಯಲ್ಲಿ ಇರಬೇಡ. ಹಣ ತರಲಿಲ್ಲವೆಂದರೆ ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂದು ಹೆದರಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಜು.೨೫ರಂದು ಬೆಳಗ್ಗೆ ೭ ಗಂಟೆಗೆ ಪೂಜಾ ಮೃತಪಟ್ಟಿರುವ ವಿಚಾರ ತಿಳಿದು ಪಾಂಡವಪುರ ಆಸ್ಪತ್ರೆಗೆ ತೆರಳಿದೆವು. ಅಲ್ಲಿ ವಿಚಾರಿಸಿದಾಗ ರಾತ್ರಿ ಪೂಜಾ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ನಾಗಣ್ಣ ಎಂಬುವರು ತಿಳಿಸಿದ್ದಾರೆ. ಪೂಜಾ ಆತ್ಮಹತ್ಯೆ ಮಾಡಿಕೊಂಡಿಲ್ಲ, ವರದಕ್ಷಿಣೆ ಹಣಕ್ಕಾಗಿ ಗಂಡ ಅಭಿನಂದನ್, ಅತ್ತೆ ಶಾಂತಮ್ಮ, ಮೈದುನ ಕಿರಣ್ ಅವರು ಸೇರಿಕೊಂಡು ಹಲ್ಲೆ ನಡೆಸಿ, ಮಾನಸಿಕ- ದೈಹಿಕ ಹಿಂಸೆ ನೀಡಿದ್ದಾರೆ. ಇವರ ಹಿಂಸೆ ತಾಳಲಾರದೆ ಪೂಜಾ ನೇಣಿಗೆ ಶರಣಾಗಿದ್ದಾಳೆ ಎಂದು ದೂರಿದ್ದಾರೆ.

ಪೊಲೀಸ್ ಠಾಣೆಗೆ ಮುತ್ತಿಗೆ:

ಪೂಜಾಳ ಸಾವಿಗೆ ಕಾರಣರಾದ ಪತಿ ಅಭಿನಂದನ್ ಸೇರಿದಂತೆ ಅವರ ಮನೆಯವರ ವಿರುದ್ಧ ದೂರು ನೀಡಲು ಪೋಷಕರು ಮುಂದಾದಾಗ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದ್ದನ್ನು ವಿರೋಧಿಸಿ ನೂರಾರು ಸಂಖ್ಯೆಯಲ್ಲಿ ಠಾಣೆಗೆ ಮುತ್ತಿಗೆ ಹಾಕಿದರು. ಎಫ್‌ಐಆರ್ ದಾಖಲಿಸುವಂತೆ ಮೃತ ಪೂಜಾಳ ಪೋಷಕರು ಬಿಗಿಪಟ್ಟು ಹಿಡಿದರು.

ಅಷ್ಟರಲ್ಲಿ ಆರೋಪಿಗಳಾದ ಅಭಿನಂದನ್ ಮತ್ತು ಕಿರಣ್‌ಕುಮಾರ್ ಪೊಲೀಸರಿಗೆ ಶರಣಾಗಿದ್ದರು. ಕೊನೆಗೆ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.