ದೇವರಹಿಪ್ಪರಗಿ: ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆನಂದ.ಕೆ ಅವರು ದೇವರಹಿಪ್ಪರಗಿ ವಿವಿಧೆಡೆ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.

ಪಟ್ಟಣದ ಸಮೀಪದ ಅವುಗೇಶ್ವರ ತಪೋಧಾಮ ಪರದೇಶಿ ಮಠದ ಜಮೀನಲ್ಲಿ ಇದ್ದ ಕಬ್ಬು ಹಾಗೂ ವಿವಿಧ ಜಮೀನುಗಳಲ್ಲಿ ಬೆಳೆದ ಹತ್ತಿ ಮತ್ತು ತೊಗರಿ ಬೆಳೆಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ ರೈತರಿಂದ ಮಳೆಯ ಕೊರತೆಯಿಂದ ಉಂಟಾದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಬೆಳೆ ಹಾನಿ ಹಾಗೂ ನೀರಿನ ಲಭ್ಯತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಪ್ರಮುಖ ಬೆಳೆಗಳ ಬೆಳವಣಿಗೆ ಕುಂಠಿತವಾಗಿರುವುದನ್ನು ಗಮನಿಸಿ, ರೈತರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ತಲುಪಿಸುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಡಿ.ಡಿ.ಎ ಚಂದ್ರಕಾಂತ ಪವಾರ, ಎ.ಡಿ ಪ್ರಶಾಂತ್ ಸಾಣೆ, ತಹಸೀಲ್ದಾರ್ ನಿಂಗಣ್ಣ ಬಿರಾದಾರ, ಕೃಷಿ ಅಧಿಕಾರಿ ಶರಣಗೌಡ ಬಿರಾದಾರ, ರಮಾನಂದ ಚಕಡಿ, ಪರದೇಶಿ ಮಠದ ಶ್ರೀಗಳು, ಸತೀಶ್, ಮುರುಗೇಂದ್ರ ಇಂಡಿ, ಸಂಗಮೇಶ ಮಸಬಿನಾಳ, ವೀರಭದ್ರಯ್ಯ ಇಂಡಿ, ಕಾಸು ಕುದರಿ,ಲಕ್ಷ್ಮಣ ವಡ್ಡರ ಸೇರಿದಂತೆ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.