ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶ್ರಮದ ಗೌರವ, ಸೇವಾ ಮನೋಭಾವ, ಸಮಾನತೆ ಹಾಗೂ ಪ್ರಾಮಾಣಿಕತೆಯ ಸಂದೇಶವನ್ನು ಸಮಾಜಕ್ಕೆ ಸಾರಿದವರು ಶಿವಶರಣ ಹಡಪದ ಅಪ್ಪಣ್ಣನವರು ಎಂದು ಬಾಗಲಕೋಟೆ ಶಾಸಕ ಉಮೇಶ ಮೇಟಿ ಹೇಳಿದರು.ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಡಪದ ಅಪ್ಪಣ್ಣನವರು ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಶ್ರೇಷ್ಠ ಶಿವಶರಣರಾಗಿದ್ದಾರೆ. ಬಸವಣ್ಣನವರ ಬಾಲ್ಯದ ಒಡನಾಡಿಯಾಗಿ ಅನುಭವ ಮಂಟಪದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾಯಕ, ದಾಸೋಹ, ಸಮಾನತೆ ಹಾಗೂ ಮಾನವೀಯತೆಯ ಸಂದೇಶವನ್ನು ಜನರಲ್ಲಿ ಹರಡಿದವರು ಎಂದರು.
ಇಂದಿನ ಯುವಜನತೆ ಹಡಪದ ಅಪ್ಪಣ್ಣನವರ ಆದರ್ಶಗಳನ್ನು ಅರಿತುಕೊಂಡು ಪ್ರಾಮಾಣಿಕತೆ, ಪರಿಶ್ರಮ, ಮಾನವೀಯತೆ ಹಾಗೂ ಸಾಮಾಜಿಕ ಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಮಾಜದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ದುಡಿಮೆಯನ್ನು ದೇವರ ಪೂಜೆಯೆಂದು ಭಾವಿಸಿ ಬದುಕುವ ಈ ಸಮಾಜ ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದೆ ಎಂದರು.ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಸಮುದಾಯ ಅಭಿವೃದ್ದಿಯತ್ತ ಸಾಗಬೇಕಾದರೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣವೇ ಸಮಾಜದ ಪ್ರಗತಿಗೆ ಅಡಿಪಾಯವಾಗಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣದತ್ತ ಪ್ರೋತ್ಸಾಹಿಸಬೇಕು. ಹಡಪದ ಅಪ್ಪಣ್ಣನವರ ಮಾರ್ಗದರ್ಶನದ ಮೌಲ್ಯಗಳೊಂದಿಗೆ ಶಿಕ್ಷಣವನ್ನು ಅಳವಡಿಸಿಕೊಂಡಾಗ ಸಮಾಜ ಇನ್ನಷ್ಟು ಪ್ರಗತಿಯತ್ತ ಸಾಗಲಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಮುದ್ದೇಬಿಹಾಳದ ಎಂಜಿವಿಸಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಬಸವರಾಜ ಹಡಪದ ಮಾತನಾಡಿ, 12ನೇ ಶತಮಾನದ ಶರಣ ಹಡಪದ ಅಪ್ಪಣ್ಣವರು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವರು. ಸಮಾಜವನ್ನು ತಮ್ಮ ವಚನಗಳ ಮೂಲಕ ಹೊಸ ಬೆಳಕಿನತ್ತ ಕೊಂಡೊಯ್ಯಲು ಶ್ರಮಿಸಿದವರು ಎಂದರು. ನಂತರ ಅವರ ಜೀವನ ಚರಿತ್ರೆ ಹಾಗೂ ಬೆಳೆದು ಬಂದ ದಾರಿಯನ್ನು ವಿವರವಾಗಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಮುದಾಯದಲ್ಲಿ ಉತ್ತಮ ಸಾಧನೆ ಮಾಡಿದ ಮಲ್ಲಿಕಾರ್ಜುನ ಹಡಪದ, ದ್ಯಾಮಗೊಂಡ ಹಡಪದ ಹಾಗೂ ಡಾ.ಯಲ್ಲಪ್ಪ ಹಡಪದ ಅವರಿಗೆ ಸನ್ಮಾನಿಸಿ, ನಿಜಸುಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಬಿವಿವ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಮಹೇಶ್ವರಿ ಶಿರೋಳ ಅವರನ್ನು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಹ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅನೀಲಕುಮಾರ ದಡ್ಡಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಚೊಳಚಗುಡ್ಡ, ಎಚ್.ಡಿ.ವೈದ್ಯ, ಲಕ್ಷ್ಮಣ ಹಡಪದ, ಎ.ಜಿ.ಹಡಪದ, ಮಲ್ಲಪ್ಪ ಸೂಳಿಕೇರಿ ಸೇರಿದಂತೆ ಇತರರಿದ್ದರು.ಅದ್ಧೂರಿ ಭಾವಚಿತ್ರದ ಮೆರವಣಿಗೆಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಶಾಸಕ ಉಮೇಶ ಮೇಟಿ ಅವರು ಹಡಪದ ಅಪ್ಪಣ್ಣವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಕೊನೆಗೆ ಡಾ.ಬಿ.ಆರ್.ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.