ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಡಿಸಿ ಚಾಲನೆ

| Published : Sep 23 2025, 01:04 AM IST

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಡಿಸಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮೀಕ್ಷೆಗೆ ನಿಯೋಜನೆ ಆಗಿರುವ ಸಿಬ್ಬಂದಿಗಳು ತಮಗೆ ಹಂಚಿಕೆ ಆಗಿರುವ ಮನೆ, ಕುಟುಂಬಗಳ ಮಾಹಿತಿಯನ್ನು ನಿಯಮಾನುಸಾರ ಭರ್ತಿ ಮಾಡಬೇಕು. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾ ತಾಂತ್ರಿಕ ಸಮಾಲೋಚಕರಿಗೆ ಅಥವಾ ಸಹಾಯವಾಣಿಗೆ ಕರೆ ಮಾಡಿ, ಪರಿಹರಿಸಿಕೊಳ್ಳಬೇಕು.

ಧಾರವಾಡ:

ಸಾಕಷ್ಟು ವಿವಾದ ಸೃಷ್ಟಿಸಿರುವ, ಪ್ರತಿಪಕ್ಷಗಳ ವಿರೋಧದ ನಡುವೆಯೇ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ (ಜಾತಿ ಗಣತಿ) ಜಿಲ್ಲೆಯಲ್ಲಿ ಸೋಮವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಚಾಲನೆ ನೀಡಿದ್ದು 16 ದಿನದಲ್ಲಿ 5.46 ಕುಟುಂಬಗಳ ಸಮೀಕ್ಷೆ ನಡೆಯಲಿದೆ.

ನಗರದ ಪೆಂಡಾರಗಲ್ಲಿ, ತಡಕೋಡ ಓಣಿ ಪ್ರದೇಶಗಳಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ, ಸಮೀಕ್ಷೆ ಪರಿಶೀಲಿಸಿ, ಸಮೀಕ್ಷೆದಾರರಿಂದ ಮಾಹಿತಿ ಪಡೆದು, ಮಾರ್ಗದರ್ಶನ ಮಾಡಿದರು.

ಪೆಂಡಾರಗಲ್ಲಿಯ ರೇಣುಕಾ ಬೋಮ್ಮಣ್ಣವರ ಮನೆಯ ಕುಟುಂಬ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಕುಟುಂಬದ ಮುಖ್ಯಸ್ಥೆ ರೇಣುಕಾ ಅವರಿಂದ ಸಮೀಕ್ಷಾ ಪ್ರಶ್ನಾವಳಿ ಕುರಿತು ಮಾಹಿತಿ ಪಡೆದು, ಸಮೀಕ್ಷೆಯ ಉಪಯುಕ್ತತೆ ವಿವರಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಸಮೀಕ್ಷೆಗೆ ನಿಯೋಜನೆ ಆಗಿರುವ ಸಿಬ್ಬಂದಿಗಳು ತಮಗೆ ಹಂಚಿಕೆ ಆಗಿರುವ ಮನೆ, ಕುಟುಂಬಗಳ ಮಾಹಿತಿಯನ್ನು ನಿಯಮಾನುಸಾರ ಭರ್ತಿ ಮಾಡಬೇಕು. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾ ತಾಂತ್ರಿಕ ಸಮಾಲೋಚಕರಿಗೆ ಅಥವಾ ಸಹಾಯವಾಣಿಗೆ ಕರೆ ಮಾಡಿ, ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.ಸಮೀಕ್ಷಿಕರು ತಮಗೆ ಗುರುತಿಸಿರುವ ಎಲ್ಲ ಮನೆ ಹಾಗೂ ಕುಟುಂಬಗಳ ಸಮೀಕ್ಷೆಯನ್ನು ಅ. 7ರೊಳಗೆ ಪೂರ್ಣಗೊಳಿಸಬೇಕು. ಪ್ರತಿದಿನ ಸಂಜೆ ಅಂದಿನ ಸಮೀಕ್ಷೆ ಕಾರ್ಯದ ಪ್ರಗತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದ ಅವರು, ಅ. 7ರ ವರೆಗೆ 5.46 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಯಲಿದೆ. ಹೆಸ್ಕಾಂ ಇಲಾಖೆ ಮುಖಾಂತರ ಪ್ರತಿ ಮನೆಗೂ ಪ್ರತ್ಯೇಕವಾಗಿ ಐಡಿ ಕೊಡುವ ಮುಖಾಂತರ ಅದನ್ನು ಗುರುತಿಸಿ, 150ರಿಂದ 200 ಮನೆಗಳನ್ನು ಒಂದು ಗುಂಪಾಗಿ ವಿಂಗಡಿಸಲಾಗಿದೆ ಎಂದರು. ಜಿಲ್ಲೆಯಲ್ಲಿ 4880 ಸಮೀಕ್ಷಿಕರು ಮತ್ತು ಮೇಲ್ವಿಚಾರಣೆ ಮಾಡಲು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ ಹಂತದಲ್ಲೂ ರಾಜ್ಯ, ಜಿಲ್ಲಾ, ಒಂದೊಂದು ಬ್ಲಾಕ್ ಮಟ್ಟದಲ್ಲಿ ತರಬೇತಿ ನೀಡಲು ಮಾಸ್ಟರ್ ಟ್ರೈನರ್‌ಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ಸಾರ್ವಜನಿಕರು ಕೈ ಜೋಡಿಸಿ ಸಮೀಕ್ಷೆ ಯಶಸ್ವಿ ಮಾಡಬೇಕು ಎಂದು ಹೇಳಿದರು.

ಈ ವೇಳೆ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಭಾನುಮತಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ತಾಲೂಕು ವಿಸ್ತರಣಾ ಅಧಿಕಾರಿ ಸಂಜೀವ ಕೆಸರಿ, ಬ್ಲಾಕ್ ಮೇಲ್ವಿಚಾರಕರು, ನಿಲಯಪಾಲಕರು ಸಮೀಕ್ಷಿಕರು ಉಪಸ್ಥಿತರಿದ್ದರು.