ಗದಗ ಜಿಲ್ಲೆಯಲ್ಲಿ ಜಾತಿ ಸಮೀಕ್ಷೆಗೆ ಚಾಲನೆ

| Published : Sep 23 2025, 01:04 AM IST

ಸಾರಾಂಶ

​ತಾಂತ್ರಿಕ ಕಾರಣಗಳಿಂದಾಗಿ ಭಾನುವಾರವೇ ನಡೆಯಬೇಕಿದ್ದ ಕಿಟ್ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಗದಗ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗದಗ: ಬಹುನಿರೀಕ್ಷಿತ ಜಾತಿ ಸಮೀಕ್ಷಾ ಕಾರ್ಯಕ್ಕೆ ಜಿಲ್ಲೆಯಲ್ಲಿ ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು. ಜಿಲ್ಲಾದ್ಯಂತ ಒಟ್ಟು 2601 ಶಿಕ್ಷಕರಿಗೆ ಸಮೀಕ್ಷಾ ಗಣತಿದಾರರ ಜವಾಬ್ದಾರಿಯನ್ನು ವಹಿಸಲಾಗಿದ್ದು, ಅವರಿಗೆ ಅಗತ್ಯ ಕಿಟ್‌ಗಳನ್ನು ವಿತರಿಸಲಾಯಿತು.

​ತಾಂತ್ರಿಕ ಕಾರಣಗಳಿಂದಾಗಿ ಭಾನುವಾರವೇ ನಡೆಯಬೇಕಿದ್ದ ಕಿಟ್ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಗದಗ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮೀಕ್ಷಾ ಕಾರ್ಯಕ್ಕಾಗಿ ಸಜ್ಜಾಗಿ ಬಂದಿದ್ದ ಶಿಕ್ಷಕರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡವು ಕಿಟ್‌ಗಳನ್ನು ಹಸ್ತಾಂತರಿಸಿತು. ಪ್ರತಿ ಕಿಟ್‌ನಲ್ಲಿ ಬ್ಯಾಗ್, ಸಮೀಕ್ಷಾ ಕೈಪಿಡಿ, ಕ್ಯಾಪ್ ಮತ್ತು ಗುರುತಿನ ಚೀಟಿ(ಐಡಿ) ಸೇರಿವೆ.

​ಸಮೀಕ್ಷೆಗೆ ಸಂಬಂಧಿಸಿದ ಆ್ಯಪ್ ಮತ್ತು ಇತರ ತಾಂತ್ರಿಕ ವಿಷಯಗಳ ಬಗ್ಗೆ ಶಿಕ್ಷಕರಿಗೆ ಇದ್ದ ಗೊಂದಲಗಳನ್ನು ಅಧಿಕಾರಿಗಳು ನಿವಾರಿಸಿದರು.

​ಈ ಸಮೀಕ್ಷೆಯು ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಗಳ ಕುರಿತು ನಿರ್ಣಾಯಕ ಮಾಹಿತಿ ಸಂಗ್ರಹಿಸಲು ಸಹಾಯ ಮಾಡುತ್ತದೆ. ಈ ಮೂಲಕ ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ದತ್ತಾಂಶವನ್ನು ಒದಗಿಸಲಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಸಮರ್ಪಕವಾಗಿ ಜಾತಿ ಗಣತಿ ನಡೆಸಿ: ಶಾಸಕ ಜಿ.ಎಸ್. ಪಾಟೀಲ

ರೋಣ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ತರ ಕಾರ್ಯವಾದ ಜಾತಿಗಣತಿಗೆ ಚಾಲನೆ ದೊರೆತಿದ್ದು, ಗಣತಿದಾರರು ಪ್ರತಿ ಮನೆ ಮನೆಗಳಿಗೆ ತೆರಳಿ ಸಮರ್ಪಕ ಮಾಹಿತಿ ಪಡೆದು ಯಾವುದೇ ತೊಂದರೆ, ಸಮಸ್ಯೆಗಳಾಗದಂತೆ ಸಮರ್ಪಕ ಜಾತಿ ಗಣತಿ ನಡೆಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.ಸೋಮವಾರ ಪಟ್ಟಣ ಗುರುಭವನದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಮಾಡುವ ಸಿಬ್ಬಂದಿಗೆ ಕಿಟ್ ವಿತರಿಸಿ ಮಾತನಾಡಿದರು.ಮಕ್ಕಳ ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಉದ್ದೇಶ ಸೇರಿದಂತೆ ಅನೇಕ ಕಡೆ ಜಾತಿ ಪ್ರಮಾಣಪತ್ರದ ಅಗತ್ಯವಿದ್ದು, ರಾಜ್ಯದಲ್ಲಿ ಜಾತಿಗಣತಿ ಕಾರ್ಯವನ್ನು ಆರಂಭಿಸಲಾಗುತ್ತಿದ್ದು, ಜನರು ಗಣತಿದಾರರಿಗೆ ಸಹಕಾರ ನೀಡಬೇಕು. ತಮ್ಮ ಜಾತಿ ಉಪಜಾತಿಗಳ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಬೇಕು ಎಂದರು.

ಪ್ರತಿಯೊಂದು ಗ್ರಾಮ ತಾಲೂಕು ಜಿಲ್ಲೆಗಳಲ್ಲಿ ಜಾತಿ ಗಣತಿ ಕಾರ್ಯಾರಂಭಗೊಳಿಸಲಾಗಿದ್ದು, ಗಣತಿದಾರರು ಪ್ರತಿ ಮನೆ ಮನೆಗಳಿಗೆ ತೆರಳಿ ಜನರಿಂದ ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ರೀತಿಯ ತಪ್ಪು ಹಾಗೂ ತೊಂದರೆಗಳಾಗದಂತೆ ಗಣತಿದಾರರು ನಿಗಾ ವಹಿಸಿ ಸಮರ್ಪಕವಾಗಿ ಗಣತಿ ನಡೆಸಬೇಕು. ಇದರಲ್ಲಿ ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿದ್ದು, ಗಣತಿದಾರರು ತಮ್ಮ ಮನೆಗಳಿಗೆ ಬಂದ ಸಂದರ್ಭದಲ್ಲಿ ತಮ್ಮ ಧರ್ಮ ಜಾತಿ ಯಾವುದು ಎಂಬುದರ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಿ ಸಹಕರಿಸಿ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ ಗಣತಿ ಕಾರ್ಯಕ್ಕೆ ಚಾಲನೆ ನೀಡಿದ್ದು, ಶೋಷಿತ ಹಿಂದುಳಿದ ವರ್ಗಗಳ ಸಮುದಾಯ ಸಮಾಜದ ಜನರಿಗೆ ಸರ್ಕಾರದಿಂದ ಸಮರ್ಪಕವಾಗಿ ದೊರೆಯಬೇಕಾದ ಸೌಲಭ್ಯಗಳು ದೊರೆಯಬೇಕು. ಶೈಕ್ಷಣಿಕದಲ್ಲಿ ಉದ್ಯೋಗದಲ್ಲಿ ನಿಜವಾದ ಅರ್ಹರಿಗೆ ಸರ್ಕಾರದ ಸೌಲಭ್ಯ ದೊರೆಯಬೇಕು ಎಂದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕ ವಿಸ್ತೀರ್ಣಾಧಿಕಾರಿ ಮಲ್ಲಿಕಾರ್ಜುನ ಹಣಸಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ ಆಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಹಾಗೂ ಗಣತಿದಾರರು ಉಪಸ್ಥಿತರಿದ್ದರು.