ಗದುಗಿನಲ್ಲಿ ಹಾಸ್ಟೆಲ್‌ಗೆ ತೆರಳಲು ದಾರಿ ಯಾವುದಯ್ಯಾ?

| Published : Sep 23 2025, 01:04 AM IST

ಗದುಗಿನಲ್ಲಿ ಹಾಸ್ಟೆಲ್‌ಗೆ ತೆರಳಲು ದಾರಿ ಯಾವುದಯ್ಯಾ?
Share this Article
  • FB
  • TW
  • Linkdin
  • Email

ಸಾರಾಂಶ

2018ರಲ್ಲಿಯೇ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳ ವಸತಿಗಾಗಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಹಾಸ್ಟೆಲ್‌ಗೆ ತೆರಳಲು ರಸ್ತೆಗೆ ಆದ್ಯತೆ‌ ನೀಡಿಲ್ಲ.

ಶಿವಕುಮಾರ ಕುಷ್ಟಗಿ

ಗದಗ: ಇಲ್ಲಿನ ಎಸ್.ಎಂ. ಕೃಷ್ಣ ನಗರದಲ್ಲಿ ನಿರ್ಮಾಣವಾಗಿರುವ ಅಲ್ಪಸಂಖ್ಯಾತರ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಇದುವರೆಗೂ ರಸ್ತೆಯೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.2018ರಲ್ಲಿಯೇ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳ ವಸತಿಗಾಗಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಹಾಸ್ಟೆಲ್‌ಗೆ ತೆರಳಲು ರಸ್ತೆಗೆ ಆದ್ಯತೆ‌ ನೀಡಿಲ್ಲ.ರಸ್ತೆಯೇ ಇಲ್ಲ:

ಈ ವಸತಿ ನಿಲಯ ನಿರ್ಮಾಣವಾಗಿ 7 ವರ್ಷ ಕಳೆದಿದೆ. ಇದುವರೆಗೂ ಹಾಸ್ಟೆಲ್‌ಗೆ ತೆರಳಲು ರಸ್ತೆಯೇ ಇಲ್ಲ. ಪಕ್ಕದಲ್ಲಿಯೇ ಇರುವ ಉದ್ಯಾನವನದಲ್ಲಿಯೇ ಹಾಯ್ದು ಬರಬೇಕು. ಅಧಿಕಾರಿಗಳ ಜೀಪು ಇಲ್ಲಿಗೆ ಬರದೇ ಹಲವಾರು ವರ್ಷಗಳೇ ಕಳೆದಿದ್ದು, ಇಲ್ಲಿಗೆ ಬರುವವರು ನಡೆಯುವುದು ಅನಿವಾರ್ಯ.

180 ವಿದ್ಯಾರ್ಥಿಗಳು: ಪ್ರಸ್ತುತ ಈ ಹಾಸ್ಟೆಲ್‌ನಲ್ಲಿ‌ 180 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ನಿತ್ಯವೂ ಬೇಕಾಗುವ ಆಹಾರ ಸಾಮಗ್ರಿಗಳನ್ನು ಸಿಬ್ಬಂದಿ ದೂರದಲ್ಲಿರುವ ಮುಖ್ಯ ರಸ್ತೆಯಿಂದ ಹೊತ್ತು ತರಬೇಕಾದ ಅನಿವಾರ್ಯತೆ ಇದೆ.

ಮನವಿಗೆ ಸ್ಪಂದನೆ ಇಲ್ಲ: ಹಾಸ್ಟೆಲ್‌ಗೆ ತೆರಳಲು ರಸ್ತೆ ಇಲ್ಲದೇ ಇರುವ ಕುರಿತು ಅಧಿಕಾರಿಗಳು ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸ್ಪಂದಿಸಬೇಕಾದ ನಗರಸಭೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು.ಅಸಹಕಾರ: ಹಾಸ್ಟೆಲ್‌ನ ಅಕ್ಕಪಕ್ಕದ ಬಡಾವಣೆಗಳ ನಿವಾಸಿಗಳು ಸಂಚಾರಕ್ಕೆ ದಾರಿ ಕೊಡದೆ ಹಾಸ್ಟೆಲ್ ಅಧಿಕಾರಿಗಳಿಗೆ, ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.

ಕೇಂದ್ರ ಕಚೇರಿಗೂ ಪತ್ರ: ರಸ್ತೆ ತೊಂದರೆ ಕುರಿತು ಈಗಾಗಲೇ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ನಗರಸಭೆ ಅಧಿಕಾರಿಗಳ ಗಮನಕ್ಕೆ ಲಿಖಿತವಾಗಿ ತರಲಾಗಿದೆ. ಕೇಂದ್ರ ಕಚೇರಿಗೂ ಪತ್ರ ಬರೆಯಲಾಗಿದೆ ಎಂದು ಅಲ್ಪ‌ಸಂಖ್ಯಾತ ಇಲಾಖೆಯ ತಾಲೂಕು ಅಧಿಕಾರಿ ಶರಣಪ್ಪ ಗೊರೇಬಾಳ ತಿಳಿಸಿದರು.