ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ । ರಸ್ತೆ, ಸೇತುವೆ ಭಾಗ್ಯ ವಂಚಿತ ಪ್ರದೇಶ

ಕನ್ನಡಪ್ರಭ ವಾರ್ತೆ ಹೊನ್ನಾವರ

ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ತಾಲೂಕಿನ ಭಾಸ್ಕೇರಿ ಸಮೀಪದ ಹೊಸಾಕುಳಿ ಗ್ರಾಮದ ದೊಡ್ಡಹಿತ್ತಲ್‌ನಲ್ಲಿ ಮೃತ ವ್ಯಕ್ತಿಯೊಬ್ಬರ ದೇಹವನ್ನು ತುಂಬಿ ಹರಿಯುತ್ತಿರುವ ನದಿಯಲ್ಲೇ ಕುತ್ತಿಗೆ ಮಟ್ಟದ ನೀರಿನಲ್ಲಿ ತೀರಾ ಅಪಾಯಕಾರಿಯಾಗಿ ಸಾಗಿಸುವ ದೃಶ್ಯ ಮನ ಕರಗಿಸುವಂತಿತ್ತು ಮತ್ತು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.

ದೊಡ್ಡಹಿತ್ತಲ್‌ನ ನಿವಾಸಿ 30 ವರ್ಷದ ಕ್ರಿಸ್ಟನ್‌ ರೋಡ್ರಗೀಸ್‌ ಅನಾರೋಗ್ಯದಿಂದ ಮೃತಪಟ್ಟಿದ್ದರು. ಜು. 2ರಂದು ಸುಮಾರು 50 ಮೀಟರ್‌ಗೂ ಹೆಚ್ಚು ದೂರ ಮೃತದೇಹವನ್ನು ನೀರಿನಲ್ಲೇ ಹೊತ್ತು ಸಾಗಿಸಲಾಗಿದೆ.

ಈ ಹಳ್ಳದ ಮಾರ್ಗ ಹೊರತುಪಡಿಸಿದರೆ ಮತ್ತೊಂದು ಕಾಲುದಾರಿ ಇದೆ, 3 ಕಿಮೀ ದೂರವಿದ್ದು, ನಡುವೆ ತೋಟ, ಕಾಡು ಇರುವುದರಿಂದ ಹೆಚ್ಚು ಸಮಯ ಹಿಡಿಯುತ್ತದೆ. ಹಾಗೂ ಅದೂ ಸಹ ಅಪಾಯಕಾರಿಯೇ ಹಾಗಾಗಿ ಭಾಸ್ಕೇರಿ ಹಳ್ಳದ ಮೂಲಕವೇ ಜನ ಓಡಾಡುತ್ತಾರೆ. ಅದೇ ಮಾರ್ಗದಲ್ಲಿಯೇ ಶವವನ್ನೂ ಸಾಗಿಸಿ ಅಂತ್ಯಸಂಸ್ಕಾರ ಮಾಡಲಾಯಿತು.


ದೊಡ್ಡಹಿತ್ತಲ್ ಮಜರೆಯಲ್ಲಿ ಸರಿಸುಮಾರು 50 ಮನೆಗಳಿದ್ದು, ಇಲ್ಲಿನ ಜನರಿಗೆ ಅಗತ್ಯವಾಗಿ ಬೇಕಾದ ರಸ್ತೆ ಮತ್ತು ಸೇತುವೆ ಭಾಗ್ಯ ಒದಗಿ ಬಂದಿಲ್ಲ. ಅಭಿವೃದ್ಧಿ ಕುರಿತು ಭಾಷಣ ಮಾಡುವ ಜನಪ್ರತಿನಿಧಿಗಳು ಇಂತಹ ಗ್ರಾಮದ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಇಲ್ಲಿನ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು, ವೃದ್ಧರೂ ಸಹ ಇದೇ ಮಾರ್ಗವಾಗಿ ಅಪಾಯಕಾರಿಯಾಗಿ ಸಂಚರಿಸಬೇಕಾಗಿದೆ. ಇಲ್ಲವಾದರೆ ಸುತ್ತುಬಳಸಿ ಜಾರುವ ಮಾರ್ಗದಲ್ಲಿ ಹೋಗಬೇಕು.

ಇಲ್ಲಿನ ಗ್ರಾಮಸ್ಥರು ಮಳೆಗಾಲದಲ್ಲಿ ತಮ್ಮ ಮನೆಗೆ ಹೋಗಲು ಸೊಂಟದವರೆಗೆ ನೀರು ದಾಟಿ ಸಂಚರಿಸುವ ಪರಿಸ್ಥಿತಿ ಇಂದಿಗೂ ಇರುವುದು, ಆಡಳಿತ ವ್ಯವಸ್ಥೆಯ ದುರವಸ್ಥೆಗೆ ಹಿಡಿದ ಕನ್ನಡಿ. ಇಲ್ಲಿನ ಜನರು ಯಾರ್‍ಯಾರದ್ದೋ ಜಾಗದಲ್ಲಿ ಅವರ ತೋಟಗಳನ್ನು ದಾಟುತ್ತಾ ಸಾಗಬೇಕಿದೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ಭಾಸ್ಕೇರಿ ಹೊಳೆಯಲ್ಲಿ ಇವರು ಓಡಾಡಬೇಕಿದೆ.

ಪ್ರತಿ ವರ್ಷವೂ ಇಲ್ಲಿನ ಜನರು ಮಳೆಗಾಲದಲ್ಲಿ ಕಾಳಜಿ ಕೇಂದ್ರಕ್ಕೆ ತೆರಳಬೇಕಾಗುತ್ತದೆ. ಇಂತಹ ಪರಿಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ.

ಓಡಾಡುವುದು ಕಷ್ಟ:

ಇದೆ ಊರಿನಿಂದ ೫೦ ಮನೆಗಳಿಂದ ಉದ್ಯೋಗಕ್ಕೆ ಹೋಗುವ ಮಹಿಳೆಯರು, ಪುರುಷರು, ಶಾಲೆಗೆ ಹೋಗುವ ಮಕ್ಕಳು ಹೀಗೆ ೧೫೦ಕ್ಕೂ ಹೆಚ್ಚು ಜನರಿಗೆ ಭೂಮಿ ಕಡಿಮೆ ಇರುವುದರಿಂದ ಉದ್ಯೋಗಕ್ಕಾಗಿ ಹೊರಗೆ ಹೋಗುವುದು ಅನಿವಾರ್ಯವೇ ಆಗಿದೆ. ಹೊಳೆ ತುಂಬಿದರೆ ಓಡಾಡುವುದು ಸಾಧ್ಯವಿಲ್ಲ. ಮನೆಯ ಜಗುಲಿಗೆ ನೀರು ಏರಿದರೆ ಕಾಳಜಿ ಕೇಂದ್ರವೇ ಗತಿ. ಇಂತಹ ಪರಿಸ್ಥಿತಿಯಲ್ಲಿ ದಿನ ದೂಡುತ್ತಿರುವ ಈ ಕೇರಿಯ ಜನ ನೂರಾರು ವರ್ಷಗಳಿಂದ ಇಲ್ಲಿದ್ದೇವೆ, ನಮಗೆ ಓಡಾಡಲು ಕಾಲು ದಾರಿ ಮಾಡಿಕೊಡಿ, ಹೊಳೆಗೆ ಒಂದು ಶಾಶ್ವತ ಸಂಕ (ಸೇತುವೆ) ಮಾಡಿಕೊಡಿ ಎಂದು ಸರ್ಕಾರಕ್ಕೆ ಮತ್ತು ಶಾಸಕರಿಗೆ ಬೇಡಿಕೆ ಸಲ್ಲಿಸಿ ದಶಕಗಳಾದವು. ಇದಕ್ಕೆ ಯಾರದೋ ತಕರಾರು ಇದೆ ಎಂಬ ನೆಪ ಹೇಳಿ ಇಂದಿಗೂ ರಸ್ತೆ ಮಾಡಿಕೊಡುತ್ತಿಲ್ಲ.

ಕಿರುಸೇತುವೆ ಆಗಲಿ:

ಸರ್ಕಾರ ಪ್ರತಿವರ್ಷ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಅನುದಾನ ಬಿಡುಗಡೆ ಮಾಡಲಿದೆ. ಆ ಹಣದಿಂದ ಈ ಭಾಗಕ್ಕೆ ಕಿರುಸೇತುವೆ, ಪುಟಪಾತ್ ನಿರ್ಮಾಣ ಹಂತ ಹಂತವಾಗಿ ಮಾಡುತ್ತಾ ಬಂದಿದ್ದರೂ ಸಮಸ್ಯೆ ಬಗೆಹರಿಯುತ್ತಿತ್ತು. ಪ್ರತಿ ಬಾರಿ ಮಳೆಗಾಲದ ಸಮಯದಲ್ಲಿ ಕಾಳಜಿ ಕೇಂದ್ರಕ್ಕೆ ಬರುವ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಿನ ವರ್ಷದೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಎನ್ನುವ ಭರವಸೆ ದಶಕಗಳಿಂದ ಹಾಗೇ ಉಳಿದಿದೆ. ಈ ಸಮಸ್ಯೆಯನ್ನು ಜನಪ್ರತಿನಿಧಿಗಳು ಶೀಘ್ರ ನಿವಾರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಸೆಯಾಗಿದೆ.