ದೇಶ, ಸಮಾಜ, ಪಾಲಕರು ಹಾಗೂ ಶಿಕ್ಷಕರು ಕಂಡ ಕನಸುಗಳನ್ನು ಮತ್ತು ನಿರೀಕ್ಷೆಗಳನ್ನು ಸಾಕಾರಗೊಳಿಸುವ ಬಹುದೊಡ್ಡ ಸವಾಲು ಇಂದು ಯುವಜನರಿಗೆ ಎದುರಾಗಿದೆ
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲ್ಯಾಬ್ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹಳಿಯಾಳದೇಶ ತನ್ನ ಮುಂದಿನ ಅಭಿವೃದ್ಧಿಯಲ್ಲಿ ಯುವಜನರಿಂದ ಸಾಕಷ್ಟು ಕೊಡುಗೆಯನ್ನು ನಿರೀಕ್ಷಿಸಿದೆ. ದೇಶ, ಸಮಾಜ, ಪಾಲಕರು ಹಾಗೂ ಶಿಕ್ಷಕರು ಕಂಡ ಕನಸುಗಳನ್ನು ಮತ್ತು ನಿರೀಕ್ಷೆಗಳನ್ನು ಸಾಕಾರಗೊಳಿಸುವ ಬಹುದೊಡ್ಡ ಸವಾಲು ಇಂದು ಯುವಜನರಿಗೆ ಎದುರಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದ ಸರ್ಕಾರಿ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೈಸೂರ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್ ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಯಡಿ ಮಂಜೂರಾದ ಕಂಪ್ಯೂಟರ್ ಮತ್ತು ಯು.ಪಿ.ಎಸ್. ಲ್ಯಾಬ್ ಲೋಕಾರ್ಪಣೆ ಮಾಡಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಂಜೂರಾದ 25 ಕಂಪ್ಯೂಟರ್‌ಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಬಳಕೆಗೆ ಸಮರ್ಪಿಸಿ ಮಾತನಾಡಿದರು.ದೇಶದಲ್ಲಿ ಉದ್ಯೋಗ ಸಾಕಷ್ಟಿದೆ. ಆದರೆ, ಉದ್ಯೋಗ ಮಾಡುವ ಸಮರ್ಥರು ಯಾರೂ ಸಿಗುತ್ತಿಲ್ಲ. ಹಿಂದೆ ಶಿಫಾರಸಿನ ಮೇಲೆ ಉದ್ಯೋಗ ದೊರೆಯುವ ಕಾಲವಿತ್ತು. ಆದರೀಗ, ಗುಣಮಟ್ಟ, ಕೌಶಲ್ಯ, ಶಿಕ್ಷಣ ಜಾಣ್ಮೆಯನ್ನು ಕಡ್ಡಾಯವಾಗಿ ಪರಿಗಣಿಸಲಾಗುತ್ತಿದೆ. ಆಧುನಿಕ ಮಾರುಕಟ್ಟೆ, ಕೈಗಾರಿಕಾ ಕ್ಷೇತ್ರ ಬಯಸುವಂತಹ ಶಿಕ್ಷಣ ಕೌಶಲ್ಯವನ್ನು ಪಡೆಯಲು ಯುವಸಮೂಹ ಮುಂದಾಗಬೇಕು ಎಂದರು.
ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ವಿಶ್ವ ಮನೆಬಾಗಿಲಿಗೆ ಬಂದಿದ್ದು, ಇದರೊಟ್ಟಿಗೆ ಯುವಸಮೂಹಕ್ಕೆ ಇಂದು ಜಾಗತಿಕ ಮಟ್ಟದಲ್ಲಿ ಫೈಪೋಟಿ ತಂದಿದೆ. ಯುವಸಮೂಹ ಆರೋಗ್ಯದ ಕಡೇ ಹೆಚ್ಚಿನ ಕಾಳಜಿ ವಹಿಸಬೇಕು, ಶಿಕ್ಷಣ, ಸಂಪತ್ತು ಇದ್ದು ಆರೋಗ್ಯವೇ ಇಲ್ಲದಿದ್ದರೇ ಏನು ಪ್ರಯೋಜನವೆಂದು ವಿವಿಧ ಉದಾಹರಣೆಗಳೊಂದಿಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಕೆ.ಎಸ್.ಡಿ.ಎಂ. ಬೆಂಗಳೂರು ಪ್ರತಿನಿಧಿ ಪರಶುರಾಮ ನಾಯ್ಕ, ಪುರಸಭಾ ಮಾಜಿ ಉಪಾಧ್ಯಕ್ಷ ಸತ್ಯಜಿತ ಗಿರಿ ಇದ್ದರು.
ಕಾಲೇಜಿನ ಪ್ರಾಚಾರ್ಯ ಮೋಹನ್ ಕೆ.ಎಸ್. ಪ್ರಾಸ್ತವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ಆರಂಭಗೊಂಡಿರುವ ವಿವಿಧ ಕೋರ್ಸ್‌ಗಳು ಹಾಗೂ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶಾಸಕರ ಸಹಕಾರದಿಂದ ಕಾಲೇಜಿಗೆ ಮಂಜೂರಾಗಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ವಿವರಿಸಿದರು. ವೆಂಕಟೇಶ್ ಗೌಡ ಹಾಗೂ ಲಕ್ಷ್ಮೀ ನಾಯ್ಕರ ಕಾರ್ಯಕ್ರಮ ನಿರ್ವಹಿಸಿದರು.-----
ಹಳಿಯಾಳ ಪಟ್ಟಣದ ಸರ್ಕಾರಿ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ ಸಮಾರಂಭದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿದರು.