ಸಾರಾಂಶ
ಖಾಸಗಿ ಕಂಪನಿಯಿಂದ ಸಾಲದ ಮೇಲೆ ಟ್ರ್ಯಾಕ್ಟರ್ ಸಹ ಖರೀದಿಸಿದ್ದರು. ಕೃಷಿಯ ಜತೆಗೆ ಟ್ರ್ಯಾಕ್ಟರ್ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.
ಪಾಂಡವಪುರ: ಸಾಲಬಾಧೆಯಿಂದ ರೈತ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಗ್ರಾಮದ ನಿಂಗೇಗೌಡರ ಪುತ್ರ ಯುವ ರೈತ ಸೋಮಶೇಖರ್(35) ಮೃತ ವ್ಯಕ್ತಿ. ತಂದೆ ನಿಂಗೇಗೌಡರಿಗೆ ಐವರು ಗಂಡು ಮಕ್ಕಳಿದ್ದು ಇವರ ಹೆಸರಿನಲ್ಲಿ 30 ಗುಂಟೆ ಜಮೀನಿದೆ. ಕೊನೆ ಪುತ್ರ ಮೃತ ಸೋಮಶೇಖರ್ ಅವಿವಾಹಿತನಾಗಿದ್ದ. ಕೃಷಿ ಬೇಸಾಯಕ್ಕಾಗಿ ಕೃಷಿಪತ್ತಿನ ಸಹಕಾರ ಸಂಘ, ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರು. ಸಾಲ ಸೇರಿದಂತೆ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಅಲ್ಲದೆ ಖಾಸಗಿ ಕಂಪನಿಯಿಂದ ಸಾಲದ ಮೇಲೆ ಟ್ರ್ಯಾಕ್ಟರ್ ಸಹ ಖರೀದಿಸಿದ್ದರು. ಕೃಷಿಯ ಜತೆಗೆ ಟ್ರ್ಯಾಕ್ಟರ್ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಾಲಗಾರರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಒತ್ತಡ ತಾಳಲಾಗದೆ ಮಂಗಳವಾರ ಬೆಳಗ್ಗೆ ಗ್ರಾಮದ ಹೊರವಲಯದ ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಕ್ಕಪಕ್ಕದ ಜಮೀನಿನಲ್ಲಿದ್ದವರು ನೋಡಿ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಪಾಂಡವಪುರ ಪಟ್ಟಣದ ಶವಗಾರಕ್ಕೆ ರವಾನಿಸಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.ವಿಷಯ ತಿಳಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಅವರು ಆಸ್ಪತ್ರೆಯ ಶವಗಾರದ ಬಳಿಗೆ ಆಗಮಿಸಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು. ಬಳಿಕ ಗ್ರಾಮದ ಹೊರವಲಯದ ಜಮೀನಿನಲ್ಲಿ ಮಂಗಳವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಈ ಸಂಬಂಧ ಮೃತ ಸೋದರ ರಮೇಶ್ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.;Resize=(128,128))
;Resize=(128,128))