ಹಾವೇರಿ: ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ವಿರೂಪಗೊಳಿಸಿರುವ ಘಟನೆಯನ್ನು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ ತೀವ್ರವಾಗಿ ಖಂಡಿಸಿದ್ದಾರೆ.ಮಹಾತ್ಮಾಗಾಂಧಿ ಪುತ್ಥಳಿ ವಿರೂಪಗೊಂಡಿರುವ ವಿಷಯ ತಿಳಿಯುತ್ತಿದ್ದಂತೆ ನಗರದ ಮಹಾತ್ಮ ಗಾಂಧಿ ಸರ್ಕಲ್‌ಗೆ ಸೋಮವಾರ ಭೇಟಿ ನೀಡಿದ ಅವರು, ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ಗಾಂಧೀಜಿಯವರ ಪುತ್ಥಳಿಗೆ ಹಾನಿ ಮಾಡಿರುವುದು ಅತ್ಯಂತ ವಿಕೃತ ಮನಸ್ಥಿತಿಯ ಕೃತ್ಯವಾಗಿದೆ. ಇದು ಕೇವಲ ಒಂದು ಪ್ರತಿಮೆಗೆ ಮಾಡಿದ ಅವಮಾನವಲ್ಲ, ಇಡೀ ದೇಶದ ಅಸ್ಮಿತೆ ಮತ್ತು ಶಾಂತಿಗೆ ಎಸಗಿದ ದ್ರೋಹವಾಗಿದೆ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.ತ್ವರಿತ ತನಿಖೆಗೆ ಆದೇಶ: ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಳವಳ ವ್ಯಕ್ತಪಡಿಸಿದ ರುದ್ರಪ್ಪ ಲಮಾಣಿ ಅವರು, ಈ ಕೂಡಲೇ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿರುವ ಇಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಅವರಿಗೆ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಎಂ.ಎಂ. ಮೈದೂರ, ಮುಖಂಡರಾದ ಪ್ರಭುಗೌಡ ಬಿಷ್ಟನಗೌಡ್ರ, ಉಮರ್ ಇನಾಮ್ದಾರ, ಶಂಕರ ಮೆಹರವಾಡೆ, ಬಸವರಾಜ ಬಳ್ಳಾರಿ, ಸಿ.ಎಸ್ ಲಕ್ಷ್ಮೇಶ್ವರಮಠ ಸೇರಿದಂತೆ ಇತರರು ಇದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಖಂಡನೆ: ಮಹಾತ್ಮಾ ಗಾಂಧೀಜಿ ಪುತ್ಥಳಿಯನ್ನು ಕಿಡಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದಿರುವುದು ಖಂಡನೀಯ. ಗಾಂಧೀಜಿಯವರ ತತ್ವಗಳ ವಿರುದ್ಧ ಇರುವ ಇಂತಹ ಶಕ್ತಿಗಳನ್ನು ಸಮಾಜದಿಂದ ಬಹಿಷ್ಕರಿಸಬೇಕು. ಈ ದೇಶದ್ರೋಹಿ ಕೃತ್ಯ ಎಸಗಿದವರಿಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆ ನೀಡುವ ಮೂಲಕ ಸಮಾಜಕ್ಕೆ ಗಟ್ಟಿ ಸಂದೇಶ ರವಾನಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಒತ್ತಾಯಿಸಿದ್ದಾರೆ.
ಗಾಂಧೀಜಿ ಪುತ್ಥಳಿ ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದು ಖಂಡನೀಯ: ರುದ್ರಪ್ಪ ಲಮಾಣಿ
ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ವಿರೂಪಗೊಳಿಸಿರುವ ಘಟನೆಯನ್ನು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ ತೀವ್ರವಾಗಿ ಖಂಡಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.