ನಗರೀಕರಣ ಮತ್ತು ಆಧುನಿಕ ಬದುಕಿನ ಒತ್ತಡದಿಂದ ನಮ್ಮ ಸುತ್ತಲ ಪರಿಸರ ಕಲುಷಿತಗೊಳ್ಳುತ್ತಿದೆ. ಅರಣ್ಯ ನಾಶದಿಂದ ಪರಿಣಾಮ ಈಗಾಗಲೇ ವನ್ಯಜೀವಿ ಮತ್ತು ಮಾನವನ ನಡುವೆ ಸಂಘರ್ಷ ಆರಂಭವಾಗಿದೆ. ಅರಣ್ಯ ನಾಶದಿಂದ ಜೈವಿಕ ಸರಪಳಿಯ ಕೊಂಡಿ ಕಳಚಲಾರಂಭಿಸಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಮಕ್ಕಳ ದಿನಾಚರಣೆ ಹೆಸರಿನಲ್ಲಿ ಪರಿಸರ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ಪ್ರತಿಭಾ ವಿಕಾಸಕ್ಕೆ ಅಗತ್ಯ ವೇದಿಕೆ ನಿರ್ಮಿಸಿರುವುದು ಶ್ಲಾಘನೀಯ ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.ಪಟ್ಟಣದ ಕೆ.ಪಿ.ಎಸ್ ಶಾಲಾ ಆವರಣದಲ್ಲಿ ‘ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್’, ರಾಜ್ಯ ಚಿತ್ರಕಲಾ ಪರಿಷತ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ವಿಜೇತರಾದ ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ನಗರೀಕರಣ ಮತ್ತು ಆಧುನಿಕ ಬದುಕಿನ ಒತ್ತಡದಿಂದ ನಮ್ಮ ಸುತ್ತಲ ಪರಿಸರ ಕಲುಷಿತಗೊಳ್ಳುತ್ತಿದೆ. ಅರಣ್ಯ ನಾಶದಿಂದ ಪರಿಣಾಮ ಈಗಾಗಲೇ ವನ್ಯಜೀವಿ ಮತ್ತು ಮಾನವನ ನಡುವೆ ಸಂಘರ್ಷ ಆರಂಭವಾಗಿದೆ. ಅರಣ್ಯ ನಾಶದಿಂದ ಜೈವಿಕ ಸರಪಳಿಯ ಕೊಂಡಿ ಕಳಚಲಾರಂಭಿಸಿದೆ. ಪರಿಸರ ನಾಶದ ದುಷ್ಪರಿಣಾಮಗಳ ಬಗ್ಗೆ ನಾವು ನಮ್ಮ ಮಕ್ಕಳಿಗೆ ಅರಿವು ಮೂಡಿಸದಿದ್ದರೆ ಮುಂದಿನ ಪೀಳಿಗೆಗೆ ಭವಿಷ್ಯ ಇರುವುದಿಲ್ಲ ಎಂದು ಎಚ್ಚರಿಸಿದರು.ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಸುಪ್ತ ಪ್ರತಿಭೆ ಇದೆ. ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅರಳಿ ವಿಕಸಿಸಲು ಅಗತ್ಯ ವೇದಿಕೆಯ ಬೇಕು. ಮಕ್ಕಳು ತಮ್ಮೊಳಗಿನ ಕೀಳರಿಮೆ ತೊಡೆದು ಹಾಕಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಪಠ್ಯ ಕಲಿಕೆಗೆ ನೀಡುವಷ್ಟೇ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನಿಡುವಂತೆ ಕರೆ ನೀಡಿದರು.
ಅರಣ್ಯ ಮತ್ತು ಪರಿಸರ ಸಂರಕ್ಷಣೆ ಕುರಿತ ಪ್ರೌಢಶಾಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆಗಳ ನೂರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ತಾಲೂಕಿನ ವಿಠಲಾಪುರ ಸರ್ಕಾರಿ ಪ್ರೌಢಶಾಲೆ 10 ನೇ ತರಗತಿ ವಿದ್ಯಾರ್ಥಿ ವೈ.ಎಂ.ಪ್ರೀತಂ, ಶೆಟ್ಟಿನಾಯಕನಕೊಪ್ಪಲು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ೯ನೇ ತರಗತಿ ವಿದ್ಯಾರ್ಥಿನಿ ಅಂಕಿತ ಪದ್ಮರಾಜ್, ಕಿಕ್ಕೇರಿ ಕೆ.ಪಿ.ಎಸ್ ಶಾಲೆ 8ನೇ ತರಗತಿ ವಿದ್ಯಾರ್ಥಿನಿ ಎ.ಚಂದನ ಪ್ರಥಮ ಬಹುಮಾನ ಪಡೆದರು.ಸಿಂಧುಘಟ್ಟ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ರಮ್ಯ, ಬಲ್ಲೇನಹಳ್ಳಿ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಮದನ್ ಗೋಪಾಲ್ ಮತ್ತು ಸೋಮನಹಳ್ಳಿ ಸಂಗಮೆಶ್ವರ ಪ್ರೌಢಶಾಲೆ ವಿದ್ಯಾರ್ಥಿನಿ ಎಸ್.ಆರ್.ತನುಶ್ರೀ ದ್ವಿತೀಯ ಬಹುಮಾನ ಪಡೆದರು. ತೇಗನಹಳ್ಳಿ ಅಶೀರ್ವಾದ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಎ.ಎಂ.ದೀಕ್ಷಿತ್, ಕೊರಟೀಕೆರೆ ಚನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿನಿ ಮನ್ವಿ ಹಾಗೂ ಕೆ.ಆರ್.ಪೇಟೆ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಎಂ.ಜೀವನ್ ತೃತೀಯ ಬಹುಮಾನ ಪಡೆದರು.
ಪಟ್ಟಣದ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಮಕ್ಕಳಿಗೆ ನೀಡಿದ ನಗದು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಿಇಒ ವೈ.ಕೆ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ರಾಘವೇಂದ್ರ, ಕನ್ನಡಪ್ರಭ ತಾಲೂಕು ವರದಿಗಾರ ಎಂ.ಕೆ.ಹರಿಚರಣತಿಲಕ್, ಶಿಕ್ಷಕರಾದ ರವಿಕುಮಾರ್, ಲೋಕೇಶ್ ಮಾತನಾಡಿದರು. ಚಿತ್ರಕಲಾ ಶಿಕ್ಷಕಿ ಲತಾ, ಶಿಕ್ಷಕರರಾದ ಶ್ರೀಧರ್, ರವಿತೇಜ, ಕೊರಟೀಕರೆ ಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಪತ್ರಕರ್ತರಾದ ಮನು, ಗಂಜೀಗೆರೆ ಮಹೇಶ್, ಸೈಯದ್ ಖಲೀಲ್ ಮತ್ತಿತರರು ಭಾಗವಹಿಸಿದ್ದರು.