ಧಾರವಾಡ:
ರೋಗಿಗಳಿಗೆ ಕಾಳಜಿ ಪೂರ್ವಕ ಹಾಗೂ ವ್ಯವಸ್ಥಿತವಾಗಿ ಜಿಲ್ಲಾಸ್ಪತ್ರೆಯನ್ನು ಮುನ್ನಡೆಸುತ್ತಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಅವರ ಅಕಾಲಿಕ ವರ್ಗಾವಣೆ ವಿರೋಧಿಸಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಧಾರವಾಡ ಧ್ವನಿ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಡಾ. ಗಾಬಿ ಅವರು ಜಿಲ್ಲಾಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರಾಗಿ ಬಳಿಕ ಜಿಲ್ಲಾ ಶಸ್ತ್ರಚಿಕಿತ್ಸಕರನ್ನಾಗಿ ನೇಮಿಸಿತ್ತು. ಆಸ್ಪತ್ರೆಯ ಸಿಬ್ಬಂದಿ ಪ್ರೀತಿ-ವಿಶ್ವಾಸ ಗಳಿಸಿದ ಅವರು, ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಚಿಕಿತ್ಸೆ ಒದಗಿಸಬೇಕು ಎಂಬ ಗುರಿಯೊಂದಿಗೆ ಇಷ್ಟು ದಿನಗಳ ಕಾಲ ಕಾರ್ಯ ಮಾಡಿದ್ದಾರೆ. ಜತೆಗೆ ಜನಪ್ರತಿನಿಧಿಗಳ ಮತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆದು, ಆಸ್ಪತ್ರೆಯ ಚಿತ್ರಣವನ್ನೇ ಬದಲಿಸಿದ್ದಾರೆ. ಆಸ್ಪತ್ರೆಯಲ್ಲಿನ ಕುಂದು-ಕೊರತೆ ನಿವಾರಿಸುವ ಜತೆಗೆ ಮಾದರಿ ಆಸ್ಪತ್ರೆ ಮಾಡಿದ್ದರು ಎಂಬ ಅಭಿಪ್ರಾಯ ಮೂಡಿಬಂದವು.
ಅವರ ಸರಳತೆ, ಸೇವಾ ಭಾವ, ಸ್ಪಂದನಾಶೀಲ ಸ್ವಭಾವದಿಂದ ಧಾರವಾಡ ಮಾತ್ರವಲ್ಲದೆ ಪಕ್ಕದ ತಾಲೂಕುಗಳ ರೋಗಿಗಳು ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅವಧಿಯಲ್ಲಿ ಯಾವುದೇ ಕಳಂಕ, ಭ್ರಷ್ಟಾಚಾರ ನಡೆದಿಲ್ಲ. ಇದೀಗ ಅವರನ್ನು ವರ್ಗಾವಣೆ ಮಾಡಲು ತೀರ್ಮಾನಿಸಿರುವುದು ರೋಗಿಗಳ, ಜನಸಾಮಾನ್ಯರ ಹಿತದೃಷ್ಟಿಯಿಂದ ಸರಿಯಲ್ಲ. ಆದ್ದರಿಂದ ಡಾ. ಗಾಬಿ ಅವರನ್ನು ಮರಳಿ ಜಿಲ್ಲಾಸ್ಪತ್ರೆಯಲ್ಲಿಯೇ ಮುಂದುವರಿಸಬೇಕು ಎಂದು ಆಗ್ರಹಿಸಲಾಯಿತು.ಒಂದು ವೇಳೆ ಈ ಭಾಗದ ಜನಸಾಮಾನ್ಯರ ಮತ್ತು ರೋಗಿಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ತೀವ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೋರಾಟಗಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಪುಂಡಲೀಕ ತಳವಾರ, ಮಂಜುನಾಥ ನಡಟ್ಟಿ, ವೆಂಕಟೇಶ ರಾಯ್ಕರ, ವೀರಯ್ಯ ಚಿಕ್ಕಮಠ, ಪರಮೇಶ್ವರ ಉಳವಣ್ಣವರ, ಇಮ್ರಾನ್ ತಾಳಿಕೋಟಿ, ಮಂಜುನಾಥ ನೀರಲಕಟ್ಟಿ, ರಾಮನಗೌಡ ಕಿತ್ತೂರ, ರಾಜೇಶ ಮನಗುಂಡಿ, ಮಂಜುನಾಥ ಭೋವಿ, ಮೈಲಾರಗೌಡ ಪಾಟೀಲ, ಪ್ರಣೀತ ರಾಮನಗೌಡರ, ಕಾರ್ತಿಕ ನಾಯಕ, ಸುರೇಶ ಕಡೇಮನಿ, ಮಹೇಶ ಕಟ್ಟಿ, ಬಸವರಾಜ ಜಾಧವ, ಲಕ್ಷ್ಮಣ ಚಲವಾದಿ, ವಿನೋದ ಕಾಳೆ, ಸುರೇಶ ಪಾಟೀಲ ಇದ್ದರು. ಉತ್ತಮ ಅಧಿಕಾರಿಗಳನ್ನು ಉಳಿಸಿಕೊಳ್ಳಿಉತ್ತಮ ಅಧಿಕಾರಿಗಳು, ವೈದ್ಯರನ್ನು ನಮ್ಮೂರಿನಲ್ಲಿಯೇ ಉಳಿಸಿಕೊಳ್ಳುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಈಗಲಾದರೂ ಪ್ರಯತ್ನಿಸಲಿ. ಜಿಲ್ಲಾಸ್ಪತ್ರೆಯ ಸುಧಾರಣೆ ವಿಷಯದಲ್ಲಿ ಡಾ. ಗಾಬಿ ಶ್ರಮಿಸಿದ್ದು ಅವರನ್ನು ಉಳಿಸಿಕೊಳ್ಳುವ ಮೂಲಕ ಆಸ್ಪತ್ರೆಯ ಅಭಿವೃದ್ಧಿ ಹಾಗೂ ರೋಗಿಗಳಿಗೆ ಸಹಾಯ ಮಾಡುವ ಕೆಲಸ ಜಿಲ್ಲೆಯ ಜನಿಪ್ರತಿನಿಧಿಗಳು ಮಾಡಬೇಕೆಂದು ಹೋರಾಟಗಾರರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.