ವಾಲ್ಮೀಕಿ ಜಯಂತಿಯಂದು ಪುತ್ಥಳಿ ನಿರ್ಮಾಣಕ್ಕೆ ಆಗ್ರಹ

| Published : Oct 01 2024, 01:21 AM IST

ವಾಲ್ಮೀಕಿ ಜಯಂತಿಯಂದು ಪುತ್ಥಳಿ ನಿರ್ಮಾಣಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಜಿಲ್ಲಾಡಳಿತ ಭವನದ ಹಳೆಯ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶ್ರೀವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ನಾಯಕ ಸಮಾಜದ ಮುಖಂಡರು ಹೊರನಡೆದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಶ್ರೀವಾಲ್ಮೀಕಿ ಜಯಂತಿ ದಿನದಂದು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬಹುವರ್ಷಗಳ ಬೇಡಿಕೆಯಾದ ವಾಲ್ಮೀಕಿ ಪುತ್ಥಳಿ ಗುದ್ದಲಿ ಪೂಜೆಗೆ ಪಟ್ಟು ಹಿಡಿದು ಸಮುದಾಯ ಮುಖಂಡರು ಅಕ್ರೋಶಗೊಂಡು ಪೂರ್ವಭಾವಿ ಸಭೆಯನ್ನು ಬಹಿಷ್ಕಾರ ಮಾಡಿ ಹೊರ ನಡೆದರು. ಜಿಲ್ಲಾಡಳಿತ ಭವನದ ಹಳೆಯ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಶ್ರೀವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡರು ಒಕ್ಕೂರಲಿನಿಂದ ಅ.17 ರಂದು ವಾಲ್ಮೀಕಿ ಜಯಂತಿ ದಿನದಂದು ಸಮುದಾಯ ಬಹುದಿನಗಳ ಬೇಡಿಕೆಯಾದ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದರೆ ಅಂದಿನ ಸರ್ಕಾರಿ ಕಾರ್ಯಕ್ರಮಕ್ಕೆ ಬರುತ್ತೇವೆ ಇಲ್ಲ ಅಂದರೆ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡುತ್ತೇನೆ ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಂದ ಸಮಂಜಸ ಉತ್ತರ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಮುದಾಯದ ಮುಖಂಡರು ಪೂರ್ವಭಾವಿ ಸಭೆ ಬಹಿಷ್ಕರಿಸಿ ಹೊರಹೋದರು. ಈ ಸಂದರ್ಭದಲ್ಲಿ ನಾಯಕ ವಿದ್ಯಾಭಿವೃದ್ದಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸನಾಯಕ ಮಾತನಾಡಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹರ್ಷಿ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡುವಂತೆ ಸಮುದಾಯದ 10 ವರ್ಷಗಳ ಬೇಡಿಕೆಯಾಗಿದ್ದು, ಅ.17 ರಂದು ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಪುತ್ಥಳಿಗೆ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡುವಂತೆ ಇಂದಿನ ಪೂರ್ವಭಾವಿ ಸಭೆಯಲ್ಲಿ ಪಟ್ಟು ಹಿಡಿದಾಗ ಜಿಲ್ಲಾಡಳಿತದಿಂದ ವತಿಯಿಂದ ಸಮಂಜನ ಉತ್ತರಬಾರದ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸಲಾಗಿದೆ.

ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ತಾರತಮ್ಯ ಮಾಡುತ್ತಿದೆ. ಒಂದು ವೇಳೆ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಕ್ರಮಕೈಗೊಳ್ಳದಿದ್ದರೆ ಜಿಲ್ಲಾಡಳಿತದಿಂದ ಆಚರಣೆ ಮಾಡುವ ವಾಲ್ಮೀಕಿ ಜಯಂತಿಯ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ವಿ.ಚಂದ್ರು, ನಗರಸಭಾ ಅಧ್ಯಕ್ಷ ಸುರೇಶ್, ಪರಿಶಿಷ್ಠ ವರ್ಗ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿಂದ್ಯಾ, ಡಿವೈಎಸ್ ಪಿ ಲಕ್ಷ್ಮಯ್ಯ, ನಾಯಕ ಸಮುದಾಯದ ಪು.ಶ್ರೀನಿವಾಸನಾಯಕ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಕಂಡಕ್ಟರ್ ಸೋಮನಾಯಕ, ಕೃಷ್ಣನಾಯಕ, ಸುರೇಶ್ ನಾಗ್, ಜಯಸುಂದರ್, ಕಂದಹಳ್ಳಿ ಮಹೇಶ್, ಚೆಂಗುಮಣಿ, ವಿರಾಟ್ ಶಿವು, ಅಂಬರೀಶ್, ಶಿವರಾಜ್, ಕೃಷ್ಣನಾಯಕ, ಮಹೇಂದ್ರ, ಶಿವರಾಂ, ಮಾದೇಶ್, ವೆಂಕಟೇಶ ನಾಯಕ, ಪ್ರಕಾಶ್,ಮಹೇಶ್ ನಾಯಕ, ರಮೇಶ್, ವೆಂಕಟರಾಮನಾಯಕ, ನಾರಾಯಣ್, ಪರಶಿವಮೂರ್ತಿ ಭಾಗವಹಿಸಿದ್ದರು.