ನ್ಯಾಯಾಧೀಶರು, ಸಿಬ್ಬಂದಿಯಿಂದ ಸಾಮೂಹಿಕ ಸ್ವಚ್ಛತಾ ಕಾರ್ಯ

| Published : Oct 01 2024, 01:21 AM IST

ನ್ಯಾಯಾಧೀಶರು, ಸಿಬ್ಬಂದಿಯಿಂದ ಸಾಮೂಹಿಕ ಸ್ವಚ್ಛತಾ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛತಾ ಕಾರ್ಯ ಕೇವಲ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಇದಕ್ಕೆ ಸಮುದಾಯಗಳು ಹಾಗೂ ನಾಗರಿಕರು ಕೈಜೋಡಿಸಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಸಿಬ್ಬಂದಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯ ನೆರವೇರಿಸಿದರು.

ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ಸಹಯೋಗದಲ್ಲಿ ಶನಿವಾರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಹರಿಣಿ ನೇತೃತ್ವದಲ್ಲಿ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಾದ ಎಸ್ ಸಿ.ನಳಿನ, ಎನ್.ವಿ.ಕೋನಪ್ಪ, ಎಸ್.ಪಿ.ಕಿರಣ್ ಹಾಗೂ ನ್ಯಾಯಾಲಯದ ಎಲ್ಲಾ ವಿಭಾಗದ ಸಿಬ್ಬಂದಿ ನ್ಯಾಯಾಲಯದ ಹೊರಾಂಗಣ ಮತ್ತು ಒಳಾಂಗಣ ದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಸಾಮೂಹಿಕವಾಗಿ ಪಾಲ್ಗೊಂಡರು.

ಪೊರಕೆ ಹಿಡಿದು ಕಸ ಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛತಾ ಅಭಿಯಾನ ಅರ್ಥಪೂರ್ಣವಾಗಿ ಆಚರಿಸಿದರು. ಈ ವೇಳೆ ಅಭಿಯಾನಕ್ಕೆ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಹರಿಣಿ, ಸ್ವಚ್ಛತಾ ಕಾರ್ಯ ಕೇವಲ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಇದಕ್ಕೆ ಸಮುದಾಯಗಳು ಹಾಗೂ ನಾಗರಿಕರು ಕೈಜೋಡಿಸಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದ ನಾಗರಿಕರು ಸ್ವಚ್ಛತಾ ಕಾರ್ಯ ಕೇವಲ ಒಂದು ದಿನದ ಕೆಲಸ ಎಂದು ಭಾವಿಸದೆ ನಿರಂತರವಾಗಿ ಈ ಕಾರ್ಯ ನಡೆಯಬೇಕು. ಇದರಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೋನಪ್ಪ ಮಾತನಾಡಿ, ದೇಶದ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಜನಪ್ರತಿನಿಧಿಗಳು. ಅಧಿಕಾರಿಗಳು ಹಾಗೂ ಜನಸಾಮಾನ್ಯರು ಮುಂದಾಗಬೇಕು. ಆಗ ಮಾತ್ರ ಮಹಾತ್ಮ ಗಾಂಧಿಯವರ ಸ್ವಚ್ಛತೆಯ ಕನಸನ್ನು ಮನಸು ಮಾಡಲು ಸಾಧ್ಯವಾಗುತ್ತದೆ ಎಂದರು.

ಅಪರ ಸಿವಿಲ್ ನ್ಯಾಯಾಧೀಶರಾದ ಎಸ್.ಸಿ.ನಳಿನ, ಸಾಂಕ್ರಾಮಿಕ ರೋಗ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಂಕ್ರಾಮಿಕ ರೋಗ ತಡೆಗಟ್ಟಲು ಲಕ್ಷಾಂತರ ಕೋಟಿ ರು. ವೆಚ್ಚ ಮಾಡುತ್ತಿವೆ ಹೀಗಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಸುಮಂತ್ ಹಾಗೂ ಪುರಸಭೆ ಸ್ವಚ್ಛತಾ ಕಾರ್ಯದ ಉಸ್ತುವಾರಿ ಮಾದೇವಮ್ಮ ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.