ಹಂದಿ, ಮಂಗಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ

| Published : Nov 13 2025, 01:15 AM IST

ಸಾರಾಂಶ

ಇಲ್ಲಿಯ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯ 2025–26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ತಲಾನ ಕಟ್ಟೆವೀರ ದೇವಾಲಯದ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ರಜನಿ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಟ್ಟಳ್ಳಿ ಗ್ರಾಮ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ವಿಸ್ತ್ರತ ಚರ್ಚೆ

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿಯ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯ 2025–26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ತಲಾನ ಕಟ್ಟೆವೀರ ದೇವಾಲಯದ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ರಜನಿ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರು ಸ್ಥಳೀಯ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು. ಮುಟ್ಟಳ್ಳಿ ಮತ್ತು ಕಸಲಗದ್ದೆ ಪ್ರದೇಶಗಳಲ್ಲಿ ಜಂಗಲ್‌ ಕಟಿಂಗ್‌ ಕಾರ್ಯ ಸರಿಯಾಗಿ ನಡೆಯದಿರುವುದರಿಂದ ಆಗಾಗ ವಿದ್ಯುತ್‌ ಸಂಪರ್ಕಕ್ಕೆ ತೊಂದರೆ ಉಂಟಾಗಿದೆ.

ಹೊಸ ಮನೆಗಳಿಗೆ ದೃಢೀಕರಣ ನೀಡಿದರೂ,ಕೆಲವು ಮನೆಗಳಿಗೆ ಇನ್ನೂ ಎನ್‌ಒಸಿ ನೀಡದಿರುವುದು ಸ್ಥಳೀಯರಿಗೆ ತೊಂದರೆ ಉಂಟುಮಾಡಿದೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಗ್ರಾಮಸ್ಥರು ಸಂಬಂಧಿತ ಅಧಿಕಾರಿಗಳಿಗೆ ಆಗ್ರಹಿಸಿದರು. ಬೀದಿ ದೀಪಗಳ ವಿದ್ಯುತ್‌ ಬಿಲ್‌ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಪಂಚಾಯಿತಿಗೆ ಆರ್ಥಿಕ ಹೊರೆ ಉಂಟಾಗಿದೆ. ಈ ಭಾರವನ್ನು ಹೆಸ್ಕಾಂ ಇಲಾಖೆ ಹೊತ್ತುಕೊಳ್ಳಬೇಕೆಂದು ಸದಸ್ಯ ದೇವಯ್ಯ ನಾಯ್ಕ ಅಭಿಪ್ರಾಯಪಟ್ಟರು.

ಕಾಡು ಹಾವಳಿ ತೀವ್ರಗೊಂಡಿದೆ. ರೈತರು ಬೆಳೆದ ಬೆಳೆಗಳು ಹಂದಿಗಳು ಹಾಗೂ ಮಂಗಗಳಿಂದ ಹಾನಿಗೊಳಗಾಗುತ್ತಿದ್ದು, ಹಂದಿಗಳು ಮತ್ತು ಮಂಗಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಹಾನಿಗೀಡಾದ ಬೆಳೆಗಳಿಗೆ ಸರಿಯಾದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಮುಟ್ಟಳಿ ಭಾಗದಲ್ಲಿ ಅರಣ್ಯ ಇಲಾಖೆ ಪ್ರತಿ ವರ್ಷ ನೆಡುವ ಎಕೇಸಿಯಾ ಗಿಡಗಳ ಬದಲು ಸ್ಥಳೀಯ ಪರಿಸರಕ್ಕೆ ಹೊಂದುವ ಬೇರೆ ಜಾತಿಯ ಗಿಡಗಳನ್ನು ನೆಡುವಂತೆ ಜನರು ಆಗ್ರಹಿಸಿದರು. ಅಂತ್ಯಸಂಸ್ಕಾರಕ್ಕಾಗಿ ಅಗತ್ಯವಾದ ಉರುವುಲು ಕಟ್ಟಿಗೆಗಳು ಸಮಯಕ್ಕೆ ಸರಿಯಾಗಿ ಡಿಪೋಗಳಲ್ಲಿ ಲಭ್ಯವಾಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.

ಅರಣ್ಯಾಧಿಕಾರಿ ಮಾತನಾಡಿ, ಸಾಗರ ರಸ್ತೆಯ ಅಕ್ಕಪಕ್ಕದಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಹಂದಿಗಳು ರಸ್ತೆಗಳಿಗೆ ಆಕರ್ಷಿತರಾಗುತ್ತಿವೆ. ಇದರ ಪರಿಣಾಮವಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದರು. ಯಾವುದೇ ರೀತಿಯ ಕಸವನ್ನು ರಸ್ತೆಯ ಬದಿಯಲ್ಲಿ ಎಸೆಯದಂತೆ ಜನರಿಗೆ ಎಚ್ಚರಿಕೆ ನೀಡಿದರು.

ಮಂಗನ ಕಾಯಿಲೆ, ಇಲಿ ಜ್ವರ, ಡೆಂಘೀ ರೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗೆ ಹೊರ ಜಿಲ್ಲೆಗಳಿಗೆ ತೆರಳುವ ರೋಗಿಗಳಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು. ಭಟ್ಕಳ ತಾಲೂಕಿನಲ್ಲಿ ರಕ್ತದ ಕೊರತೆಯ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಲು ಆಗ್ರಹಿಸಲಾಯಿತು.

ಸರ್ಕಾರ ವತಿಯಿಂದ ನೀಡಲಾಗುವ ಗೃಹಲಕ್ಷ್ಮಿ ಯೋಜನೆಯ ಹಣ ಕೆಲ ಮಹಿಳೆಯರಿಗೆ ಇನ್ನೂ ಬಂದಿಲ್ಲ ಎಂದು ಗ್ರಾಮಸಭೆಯಲ್ಲಿ ಜನರು ಆಕ್ಷೇಪ ವ್ಯಕ್ತಪಡಿಸಿದರು. ಪುರಸಭೆಯ ಘನತ್ಯಾಜ್ಯ ಘಟಕದಿಂದ ಕಪಕ್ಕ ಭಾಗದ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಘಟಕದಿಂದ ಹೊರಬರುತ್ತಿರುವ ಮಲೀನ ನೀರು ಬಾವಿಗಳಿಗೆ ನುಗ್ಗಿ,ನೀರು ನೈರ್ಮಲ್ಯ ಕಳೆದುಕೊಳ್ಳುತ್ತಿದ್ದು, ರೋಗಗಳು ಹರಡುವ ಭೀತಿ ಉಂಟಾಗಿದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕು, ಕಸಲಗದ್ದೆ ಹಾಗೂ ತಲಾನ ಭಾಗಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀವ್ರವಾಗಿದ್ದು, ಜನರು ಸಂಪರ್ಕದ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ತಕ್ಷಣ ಸರಿಪಡಿಸಬೇಕೆಂದು ಆಗ್ರಹ ವ್ಯಕ್ತವಾಯಿತು. ಸಾಗರ ರಸ್ತೆಯಲ್ಲಿ ಮದ್ಯಪ್ರಿಯರ ಮತ್ತು ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಪ್ರಭಾರಿ ಪಿಡಿಒ ಚಂದ್ರಶೇಖರ್, ಪ್ರಭಾರಿ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಮನೆ, ನೋಡಲ್ ಅಧಿಕಾರಿ ಶಿವಕುಮಾರ್, ಉಪಾಧ್ಯಕ್ಷೆ ಲಕ್ಷ್ಮೀ ಗೊಂಡ ಸೇರಿ ಸದಸ್ಯರು ಉಪಸ್ಥಿತರಿದ್ದರು.