ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಬಣಜಿಗ ಸಮುದಾಯ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಸಮುದಾಯದ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಬಣಜಿಗ ಸಮಾಜವನ್ನು ಉದ್ಯೋಗದಲ್ಲಿ 2ಎ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ತಾಳಿಕೋಟಿ ಒತ್ತಾಯಿಸಿದರು.ಪಟ್ಟಣದ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ಸಭೆ ಸೇರಿ ನಂತರ ಮೌನ ಮೆರವಣಿಗೆ ಮೂಲಕ ಮೊಹರೆ ಹನುಮಂತರಾಯರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಸಮುದಾಯ ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಲ್ಲಿ ಅವಕಾಶಗಳಿಂದ ವಂಚಿತರಾಗುತ್ತಿದ್ದೇವೆ. ಇದು ಸಂವಿಧಾನದ ಸದಾಶಯಕ್ಕೆ ವ್ಯತಿರಿಕ್ತವಾಗಿದೆ. ನ್ಯಾಯಾಲಯದ ಆದೇಶದಂತೆ ಬಣಜಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಕೂಡಲೇ ಇಲಾಖೆಗೆ ಸೂಕ್ತ ಆದೇಶವನ್ನು ಸರ್ಕಾರ ಹೊರಡಿಸುವಂತೆ ಒತ್ತಾಯಿಸಿದರು.
ಸಮಾಜದ ಮುಖಂಡರಾದ ಜಗದೀಶ ಕಲಬುರ್ಗಿ ಮಾತನಾಡಿ, ಬಣಜಿಗ ಸಮುದಾಯ ತ್ಯಾಗಮಯಿ, ದಾನಿಗಳನ್ನೊಳಗೊಂಡ ಸಮುದಾಯ. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಸೌಲಭ್ಯಕ್ಕಾಗಿ ಪ್ರವರ್ಗ 2ಎ ಮೀಸಲಾತಿ ಆದೇಶ ಜಾರಿಗೆ ಬಂದಿದೆ.ಪ್ರಮುಖವಾಗಿ ಉದ್ಯೋಗದ ಮೀಸಲಾತಿ ಅವಶ್ಯಕವಾಗಿದೆ. ಹೈಕೋರ್ಟ್ ಏಕ ಸದಸ್ಯ ಪೀಠ ಬಣಜಿಗ ಸಮುದಾಯದ ಉದ್ಯೋಗ ಮೀಸಲಾತಿ ಪ್ರವರ್ಗ ಡಿ ಹಾಗೂ ಶಿಕ್ಷಣ ಮೀಸಲಾತಿ ಪ್ರವರ್ಗ ಬಿ ಅಡಿಯಲ್ಲಿ ವರ್ಗಿಕರಿಸಿರುವುದು ಪರಿಚ್ಛೇದದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಬಣಜಿಗ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಬೇಕು ಎಂದು ಆದೇಶಿಸಿದೆ. ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಕೂಡಲೇ ಬಣಜಿಗ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಗೌರವಾಧ್ಯಕ್ಷ ಡಾ.ಸಂಗಣ್ಣ ಪಡಶೆಟ್ಟಿ, ಉಪಾಧ್ಯಕ್ಷ ಶರಣಪ್ಪ ಸಾಲಕ್ಕಿ, ಪ್ರ.ಕಾರ್ಯದರ್ಶಿ ಗಂಗಾಧರ ಬಬಲೇಶ್ವರ, ಮುಖಂಡರಾದ ಗುಂಡಪ್ಪ ಕೋರಿ, ಕಾಶಿನಾಥ ಸಾಲಕ್ಕಿ,ಉಮಾಕಾಂತ ಸೊನ್ನದ, ರಾಚಪ್ಪ ಕೋರಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ವಿರೂಪಾಕ್ಷಿ ಮಜ್ಜಿಗಿ, ಚೇತನ ಬಬಲೇಶ್ವರ, ರಾಜು ಕೋರಿ, ರಮೇಶ ದುತ್ತರಗಾಂವಿ, ವಿಶ್ವನಾಥ ಹಿರಾಪೂರ, ಶ್ರೀಶೈಲ ದೇವೂರ, ಸಂಗಮೇಶ ಅಡಕಿ, ಚಿನ್ಮಯಿ ಕೋರಿ, ಕಾಶಿನಾಥ ಕೋರಿ, ಮಲ್ಲಿಕಾರ್ಜುನ ಕೋರಿ, ಸದಾಶಿವ ಪಟ್ಟಣಶೆಟ್ಟಿ, ಬಸವರಾಜ ವಾಲಿ, ಶಿವಾನಂದ ದೇವರಮನಿ, ಪ್ರೇಮಾನಂದ ಕುಮಟಗಿ, ವಿದ್ಯಾನಂದ ಕರ್ನಾಳ, ಬಸವರಾಜ ಕೊಳಕುರ, ಶಶಿಧರ ಕುಮಟಗಿ, ಸಿದ್ದು ಜೋಗೂರ, ಪ್ರಶಾಂತ ಹೊರಸೂರೆ,ವಿನೋತ ಕೋರಿ ಸೇರಿದಂತೆ ತಾಲೂಕಿನ ಸಮುದಾಯದ ಮುಖಂಡರು ಹಾಗೂ ಪದಾಧಿಕಾರಿಗಳ ಇದ್ದರು.