ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಮಣೂರ ಗ್ರಾಪಂನಲ್ಲಿ ನಡೆದ ಮನೆ ಹಂಚಿಕೆ, ಬೋಗಸ್ ಕಾಮಗಾರಿಗಳ ಬಗ್ಗೆ ತನಿಖೆಗೆ ಆಗ್ರಹಿಸಿ ಅಂಬೇಡ್ಕರ ಸ್ವಾಭಿಮಾನಿ ಸೇನೆಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಪಂವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿ ಮಣೂರ ಗ್ರಾಮ ಪಂಚಾಯತಿಯಲ್ಲಿ ನಡೆದ 2022-23 ಹಾಗೂ 2024-25 ನೇ ಸಾಲಿನ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಆಯ್ಕೆಯಲ್ಲಿ ನೋಡಲು ಅಧಿಕಾರಿ ತಾರಾನಾಥ ರಾಠೋಡ ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕಮಹಾದೇವಿ ಒಂದೇ ಜಾತಿಗೆ ಸೇರಿದವರ ಹತ್ತಿರ ಹಣ ಪಡೆದು ಮಂಜೂರು ಮಾಡಿದ್ದಾರೆ. ಕೂಡಲೇ ಆಯ್ಕೆ ಪಟ್ಟಿ ರದ್ದುಪಡಿಸಿ ಗ್ರಾಮಸಭೆ ಕರೆದು ಪುನಃ ಆಯ್ಕೆ ಮಾಡಬೇಕು. 15ನೇ ಹಣಕಾಸಿನಲ್ಲಿ ಸುಮಾರು ₹ 40 ಲಕ್ಷ ಬೋಗಸ್ ಕ್ರಿಯಾಯೋಜನೆ ಮಾಡಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಂಜಿನಿಯರ್ ಕಾಮಗಾರಿ ಮಾಡದೆ ಬಿಲ್ ತೆಗೆದಿದ್ದಾರೆ. ಈ ಕುರಿತು ಮಾಹಿತಿ ಕೇಳಿದರೂ ಮಾಹಿತಿ ಕೊಟ್ಟಿಲ್ಲ. ಈ ಕುರಿತು 15ನೇ ಹಣಕಾಸಿನ 2023-24 ಹಾಗೂ 2024-25ನೇ ಸಾಲಿನಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಇಲ್ಲದಿದ್ದರೆ ಬರುವಂತ ದಿನಗಳಲ್ಲಿ ತಾಪಂ ಕಚೇರಿಗೆ ಬೀಗ ಜಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ಸೇನೆಯ ಜಿಲ್ಲಾಧ್ಯಕ್ಷ ಸುಖದೇವ್ ಕಟ್ಟಿಮನಿ, ರಾಜ್ಯ ಕಾರ್ಯದರ್ಶಿಯಾದ ಶರಣು ಜಮಖಂಡಿ, ತಾಲೂಕು ಘಟಕದ ಅಧ್ಯಕ್ಷರಾದ ತಿಪ್ಪಣ್ಣ ಮೇಲಿನಮನಿ, ಉಪಾಧ್ಯಕ್ಷ ಕಮಲಸಾಬ ಕಾಟಮಳ್ಳಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ತಳಕೇರಿ, ಪದಾಧಿಕಾರಿಗಳಾದ ಮುನೀರ್ ಕೋಜಗಿರಿ, ಮಲ್ಲಿಕಾರ್ಜುನ ಮೆಲಿನಮನಿ, ಅಶೋಕ ಕೊಂಡಗೂಳಿ, ಸುಖದೇವ್ ಕಟ್ಟಿಮನಿ, ಶರಣು ಜಮಖಂಡಿ, ಶಿವಶರಣ ಕಾಂಬಳೆ, ರಾಘವೇಂದ್ರ ಗುಡಿಮನಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.