ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಇಂದು ಅರಣ್ಯ ನಾಶ ಮಾಡುತ್ತಿರುವುದರಿಂದ ಹವಾಮಾನದಲ್ಲಿ ವ್ಯತ್ಯಾಸವುಂಟಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಅರಣ್ಯ ತೀವ್ರ ನಾಶವಾಗುತ್ತಿರುವುದರಿಂದ ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಅರಣ್ಯ ಬೆಳೆಸಿ ಸಂರಕ್ಷಿಸಬೇಕಿದೆ. ಅಂದಾಗ ಮಾತ್ರ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.ಪಟ್ಟಣದ ಎಪಿಎಂಸಿ ಬಡಾವಣೆಯಲ್ಲಿ ರೆಡ್ಡಿ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟನೆ ಹಾಗೂ ಪಟ್ಟಣದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ನಿರ್ಮಿಸುತ್ತಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ (ಟ್ರೀಪಾರ್ಕ್) ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಡುಗಳು ನಮ್ಮ ಗ್ರಹದ ಶ್ವಾಸಕೋಶಗಳಾಗಿವೆ. ಮರಗಳು ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತವೆ ಮತ್ತು ಉಷ್ಣವಲಯದ ಮಳೆಕಾಡುಗಳು ಅತ್ಯಂತ ಆರ್ದ್ರತೆಯಿಂದ ಕೂಡಿರುತ್ತವೆ. ಆದರೆ ಹವಾಮಾನ ವೈಪರಿತ್ಯದ ಪರಿಣಾಮ ವಾಡಿಕೆಯಂತೆ ಮಳೆಯಾಗದೇ ಮುಂಗಾರು, ಹಿಂಗಾರು ಬೆಳೆಗಳು ಕೈ ಕೊಟ್ಟು ರೈತರ ಸ್ಥಿತಿಯಂತೂ ಹೇಳದಂತಾಗಿದೆ ಎಂದರು.ನಮ್ಮ ಸುತ್ತಲು ಶೇ.35ರಷ್ಟು ಅರಣ್ಯವಿರಬೇಕು ಅಂದರೆ ಪ್ರತಿಯೊಬ್ಬ ಮನುಷ್ಯನಿಗೆ 7 ಗಿಡ, ಮರಗಳಿರಬೇಕು. ಆದರೆ, ಇಂದು ಅರಣ್ಯನಾಶ ಪರಿಣಾಮ 7 ಜನರಿಗೆ 1 ಗಿಡ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆ ಶೂನ್ಯ ಅರಣ್ಯ ಪ್ರದೇಶ ಹೊಂದಿದೆ ಎಂಬುದನ್ನು ಅರಿತು ಸಚಿವ ಎಂ.ಬಿ.ಪಾಟೀಲರು ಹೆಚ್ಚು ಅರಣ್ಯ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭಿಸಿದ್ದಾರೆ. ಪಟ್ಟಣದಲ್ಲಿ ಸುಮಾರು 37 ಎಕರೆ ಸರ್ಕಾರಿ ಕಂದಾಯ ಇಲಾಖೆಯ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ವೃಕ್ಷ ಮಾತೆ ಎಂದೇ ಖ್ಯಾತರಾಗಿರುವ ಶತಾಯುಷಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ನಿರ್ಮಿಸಿ ಉತ್ತಮ ಹಾಗೂ ಔಷಧ ಸಸ್ಯಗಳನ್ನು ಬೆಳೆಸಿ ಅತ್ಯಾಧುನಿಕ ಪ್ರವಾಸಿ ತಾಣ ಮಾಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮುಂದಿನ 6 ತಿಂಗಳೊಳಗೆ ಕಾಮಗಾರಿ ಸಂಪೂರ್ಣಗೊಳಿಸಿ ವೃಕ್ಷೋದ್ಯಾನವನ್ನು ಲೋಕಾರ್ಪಣೆಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ರೆಡ್ಡಿ ಸಹಕಾರಿ ಬ್ಯಾಂಕ್ ಸುಮಾರು 111ವರ್ಷಗಳ ಇತಿಹಾಸ ಹೊಂದಿದ್ದು, ಲಕ್ಷಾಂತರ ಬಡವರಿಗೆ ಆರ್ಥಿಕ ಸಹಕಾರ ನೀಡಿ ಬೆಳೆದುಬಂದಿದೆ. ಇದೀಗ ಹೊಸಕಟ್ಟಡ ನಿರ್ಮಿಸಿದ್ದು, ಒಳ್ಳೆಯ ಬೆಳವಣಿಗೆ. ಇನ್ನಷ್ಟು ಜನರಿಗೆ ಈ ಬ್ಯಾಂಕ್ ಅನುಕೂಲವಾಗುವಂತೆ ಶ್ರಮಿಸಬೇಕು ಎಂದರು.ಇಂದು ರಾಜಕಾರಣ ಕುಲಗೆಟ್ಟು ಹೋಗಿದೆ ಪಾವಿತ್ರತೆ ಉಳಿದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕ ರಾಜಕಾರಣಿಗಳಿಗೆ ಬೆಲೆ ಇಲ್ಲದಂತಾಗಿದೆ. ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಕಳೇದ 40 ವರ್ಷಗಳ ತಮ್ಮ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಿಲ್ಲದೇ ಸಂಭಾವಿತ ರಾಜಕಾರಣಿಯಾಗಿ ಮಾದರಿಯಾಗಿದ್ದಾರೆ. ಅವರ ಸಾಮಾಜಿಕ ಕಳಕಳಿ, ಜವಾಬ್ದಾರಿಗೆ ಜನ ಮತ್ತೆ ಅವರನ್ನು ಗೆಲ್ಲಿಸಿದ್ದಾರೆ. ಇನ್ನು ಹೆಚ್ಚು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಜನರು ಶಕ್ತಿ ತುಂಬಬೇಕು ಎಂದರು.ಈ ವೇಳೆ ವೇಮನ ಸಂಸ್ಥಾನಮಠದ ವೇಮನಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ರೆಡ್ಡಿ ಬ್ಯಾಂಕ್ ಸಲಹಾ ಸಮಿತಿ ಅಧ್ಯಕ್ಷ ರಾಯನಗೌಡ ತಾತರಡ್ಡಿ, ಪಂಚ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ತಹಸೀಲ್ದಾರ್ ಕೀರ್ತಿ ಚಾಲಕ, ತಾಪಂ ಇಒ ವೆಂಕಟೇಶ ವಂದಾಲ, ಸಿಪಿಐ ಮಹಮ್ಮದ ಫಯಿವುದ್ದಿನ, ಜಿಲ್ಲಾ ಪ್ರವಾಸವೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಅರವಿಂದ ಹೂಗಾರ, ಮುಖಂಡರಾದ ಸತೀಶ ಓಸ್ವಾಲ್, ತಾಲೂಕು ನ್ಯಾಯವಾದಿ ಸಂಗದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಸೇರಿ ಹಲವರು ಇದ್ದರು.ಮನುಷ್ಯನಿಗೆ ಆಯುಷ್ಯವಿದೆ ಆದರೇ ಆತ ಕಟ್ಟಿದ ಸಂಸ್ಥೆಗೆ ಆಯುಷ್ಯವಿಲ್ಲ. ಆತನ ಸಾಧನೆ ಸಂಸ್ಥೆಯ ಮೂಲಕ ಜನರಿಗೆ ಅನುಕೂಲ ಮಾಡಿ ಶಾಶ್ವತ ಕೀರ್ತಿಗೆ ಪಾತ್ರನಾಗುತ್ತಾನೆ. ರೆಡ್ಡಿ ಬ್ಯಾಂಕ್ ಕೂಡ ಕೆ.ಎಚ್.ಪಾಟೀಲರು ಕಟ್ಟಿದ್ದರು. ಇಂದು ಬೃಹಧಾಕಾರದಲ್ಲಿ ಬೆಳೆದು ನಿಂತಿದೆ. ಇದನ್ನು ಇನ್ನಷ್ಟು ಬೆಳೆಸಿ ಉಳಿಸುವುದು ಎಲ್ಲರ ಕರ್ತವ್ಯವಾಗಿದೆ.
- ಗುರುಶಾಂತವೀರ ಸ್ವಾಮೀಜಿ, ವಿಜಯಮಹಾಂತೇಶ ಸಂಸ್ಥಾನ ಮಠ ಚಿತ್ತರಗಿ.;Resize=(128,128))