ಉಡುಪಿ ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕೆ ದೀರ್ಘಕಾಲಿನ ಕ್ರಮಗಳಿಗೆ ಒತ್ತಾಯ

| Published : May 23 2024, 01:09 AM IST

ಉಡುಪಿ ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕೆ ದೀರ್ಘಕಾಲಿನ ಕ್ರಮಗಳಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ನೀರಿನ ಬಳಕೆಯ ಪದ್ಧತಿಯಲ್ಲಿ ಬದಲಾವಣೆ ತರುವಂತೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸಲಹೆ ನೀಡಿದರು. ಪ್ರಕೃತಿ ಬಗ್ಗೆ ಆಸಕ್ತಿ ವಹಿಸಿದಾಗ ನಿಸರ್ಗ ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಜಲಸಮೃದ್ಧ ಪ್ರದೇಶವಾದ ಉಡುಪಿಯಲ್ಲಿ ಮರುಕಳಿಸುವ ತೀವ್ರ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಉಡುಪಿ ಜಿಲ್ಲಾಡಳಿತವು ಕೆಲವು ದೀರ್ಘಕಾಲೀನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬರಹಗಾರರು, ವಿಜ್ಞಾನಿಗಳು ಮತ್ತು ಉಡುಪಿಯ ನಾಗರಿಕರು ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫ಼ಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಮತ್ತು ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ ಜಂಟಿಯಾಗಿ ಉಡುಪಿ ಜಿಲ್ಲೆಯಲ್ಲಿನ ನೀರಿನ ಬಿಕ್ಕಟ್ಟು ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ನೀರಿನ ಬಳಕೆಯ ಪದ್ಧತಿಯಲ್ಲಿ ಬದಲಾವಣೆ ತರುವಂತೆ ಸಲಹೆ ನೀಡಿದರು. ಪ್ರಕೃತಿಯ ಬಗ್ಗೆ ನಾವೂ ಕಾಳಜಿ ವಹಿಸಿದರೆ ನಿಸರ್ಗ ನಮ್ಮನ್ನು ಕಾಪಾಡುತ್ತದೆ ಎಂದು ಅಭಿಪ್ರಾಯಪಟ್ಟರು.

40 ವರ್ಷ ಕಳೆದರೂ ವಾರಾಹಿ ಕಾಲುವೆಗಳ ಕೊನೆಯ ತನಕ ನೀರು ಬಂದಿಲ್ಲ ಎಂದು ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ವಿಷಾದ ವ್ಯಕ್ತಪಡಿಸಿದರು. ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವುದು ಅಗತ್ಯವಾಗಿದೆ. ಅನೇಕ ದೇಶಗಳು ಇದನ್ನು ಮಾಡಿದೆ ಮತ್ತು ಇದನ್ನು ಪರಿಗಣಿಸಬಹುದು ಎಂದರು.

ಜಲವಿಜ್ಞಾನಿ ಡಾ.ಉದಯಶಂಕರ್ ಮಾತನಾಡಿ, ಬೇರೆ ಯಾವುದೇ ದೊಡ್ಡ ಯೋಜನೆಗಳಿಗೆ ಪ್ರವೇಶಿಸುವ ಬದಲು ಜಿಲ್ಲೆಯಲ್ಲಿ ಸಣ್ಣ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮತ್ತು ಮಳೆ ನೀರು ಕೊಯ್ಲು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂದರು.

ಗುತ್ತಿಗೆದಾರರಿಂದಾಗಿ ವಾರಾಹಿ, ಪಶ್ಚಿಮ ವಾಹಿನಿಯಂತಹ ಯೋಜನೆಗಳು ಜನವಿರೋಧಿ ಯೋಜನೆಗಳಾಗಿ ಪರಿವರ್ತನೆಯಾಗಿವೆ ಎಂದು ಲೇಖಕ ರಾಜಾರಾಂ ತಲ್ಲೂರು ವಿವರಿಸಿದರು. ಸಣ್ಣ ಚೆಕ್ ಡ್ಯಾಂ ಯೋಜನೆಗಳ ಪ್ರಾಮಾಣಿಕ ಅನುಷ್ಠಾನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಕಾರ್ಯಾಗಾರದ ಶಿಫಾರಸ್ಸುಗಳ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದರು. ಅಭಿಜಿತ್ ಅನಿಲ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಗೌತಮಿ ಕಾಕತ್ಕರ್ ವಂದಿಸಿದರು.