ಬಳ್ಳಾರಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಬಸವಾದಿ ಶರಣರ ತತ್ವಗಳನ್ನು ಪಾಲಿಸಿಕೊಂಡು ನಡೆಯುತ್ತಿದೆ. ಶೋಷಿತ ವರ್ಗಗಳ ಧ್ವನಿಯಾಗಿ, ಅಸಮಾನತೆ ಹೋಗಲಾಡಿಸಲು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸಲು, ಅವರ ಸಬಲಿಕರಣಕ್ಕಾಗಿಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಉದ್ಘಾಟಿಸಿ ಮಾತನಾಡಿದರು.ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ. ಕಾಯಕತತ್ವದ ಆಧಾರದಲ್ಲಿ ಅಧಿಕಾರ ನಡೆಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲ ಶೋಷಿತ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.12ನೇ ಶತಮಾನದಲ್ಲಿ ಜಾತೀಯತೆ, ಅಸಮಾನತೆ, ಸ್ವಜನಪಕ್ಷ ಪಾತಗಳು ತಾಂಡವವಾಡುತ್ತಿದ್ದವು. ವಚನ ಚಳುವಳಿಯ ಸಂದರ್ಭದಲ್ಲಿ ಕಾಯಕದ ಮಹತ್ವವನ್ನು ಸಾರಿದ ಶರಣರ ತ್ಯಾಗ ಮತ್ತು ಸೇವೆಯನ್ನು ನಾವೆಲ್ಲರೂ ಇಂದು ಅರಿತುಕೊಳ್ಳಬೇಕಿದೆ ಎಂದರು.
ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ ಮತ್ತು ಉರಿಲಿಂಗ ಪೆದ್ದಿಯಂತಹ ಮಹಾನ್ ಶರಣರ ಕಾಯಕ ನಿಷ್ಠೆ ಮತ್ತು ಸಮಾನತೆಯ ತತ್ವಗಳನ್ನು ಸ್ಮರಿಸಲು ರಾಜ್ಯ ಸರ್ಕಾರ ಈ ಜಯಂತ್ಯುತ್ಸವ ಆಚರಿಸುತ್ತಿದೆ ಎಂದರು.ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಎನ್.ಡಿ. ವೆಂಕಮ್ಮ ಅವರು 12ನೇ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ತಿಕ ಕ್ರಾಂತಿಯ ‘ಸುವರ್ಣ ಯುಗ’ವಾಗಿತ್ತು. ಬಸವಣ್ಣ ಮತ್ತು ಶರಣರು ವಚನಗಳ ಮೂಲಕ ಜಾತಿ, ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಎತ್ತಿಹಿಡಿದ್ದರು ಎಂದು ಹೇಳಿದರು.
ಅನುಭವ ಮಂಟಪದಲ್ಲಿದ್ದ ಶರಣರು ತಮ್ಮ ವಚನಗಳ ಮೂಲಕ ಜಾತಿ, ಧರ್ಮ, ಮತಕ್ಕಿಂತ ಮನುಷ್ಯತ್ವ ಮುಖ್ಯ ಎಂದು ಪ್ರತಿಪಾದಿಸಿದ್ದವರು. ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನೋರ್ವ ವಿಶೇಷ ಉಪನ್ಯಾಸಕರಾಗಿದ್ದ ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿನ ನಿವೃತ್ತ ಉಪನ್ಯಾಸಕಿ ಸುಶೀಲಾ ಶಿರೂರ ಮಾತನಾಡಿ, 12ನೇ ಶತಮಾನದಲ್ಲಿ ಕೇವಲ ಶರಣರು ಮಾತ್ರವಲ್ಲದೇ, ಶರಣೆಯರೂ ಇದ್ದರು. ಅವರು ಜೀವಂತವಾಗಿದ್ದ ಸಾಮಾಜಿಕ ಅಸಮಾನತೆ, ಜಾತೀಯತೆ ನಿರ್ಮೂಲನೆ ಮಾಡಲು ಅನೇಕ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾಯಕ ಶರಣರು ಕಾಯಕದ ಮೂಲಕ ಆತ್ಮಶುದ್ಧಿ ಮತ್ತು ಸಮಾಜಶುದ್ಧಿ ಎರಡನ್ನೂ ಸಾಧಿಸಿ, ಮಾನವತಾವಾದಕ್ಕೆ ಅಡಿಪಾಯ ಹಾಕಿದವರು. ಶ್ರಮಿಕ ವರ್ಗದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಮಾನತೆಯ ಪ್ರತಿಪಾದಕರು ಎಂದು ಕಾಯಕ ಶರಣರ ಕುರಿತು ವಿವರಿಸಿದರು.ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಇದಕ್ಕೂ ಮುನ್ನ ಕಂಪ್ಲಿ ತಾಲೂಕಿನ ಎಂ.ರಾಜು ಎಮ್ಮಿಗನೂರು ತಂಡ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಸೇರಿದಂತೆ ಶಿಕ್ಷಕರು-ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.