ಕನ್ನಡಪ್ರಭ ವಾರ್ತೆ ಮಂಡ್ಯ
ಕಾಲೇಜು ಶಿಕ್ಷಣ ಇಲಾಖೆಯಿಂದ ಕಾಯಂ ಅಧ್ಯಾಪಕರಾಗಿ ನೇಮಕಗೊಂಡು ಬೋಧಕೇತರ ಹುದ್ದೆಗಳನ್ನು ನಿರ್ವಹಿಸುತ್ತಿರುವವನ್ನು ತಕ್ಷಣವೇ ಮಾತೃ ಕಾಲೇಜುಗಳಿಗೆ ವಾಪಸ್ ಕಳುಹಿಸಿ ಬೋಧಕ ವೃತ್ತಿಯಲ್ಲಿ ಸೇವಾ ನಿರತರಾಗುವಂತೆ ಮಾಡಬೇಕು ಎಂದು ರಾಷ್ಟ್ರೀಯ ಅಹಿಂದಾ ಸಂಘಟನೆಗಳ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಎಂ.ನಿಂಗಯ್ಯ ಆಗ್ರಹಿಸಿದರು.ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾಯಂ ಬೋಧಕರಾಗಿ ನೇಮಕವಾದವರು ಬೋಧನಾ ಕೆಲಸ ಬಿಟ್ಟು ಇತರೆ ಬೋಧಕೇತರ ಕೆಲಸ ನಿರ್ವಹಿಸಬಾರದು ಎಂಬ ಆದೇಶವಿದೆ. ಇದನ್ನು ಗಾಳಿಗೆ ತೂರಿ ಬೆಂಗಳೂರಿನ ಶಿಕ್ಷಣ ಇಲಾಖೆಯ ಆಯುಕ್ತರ ಕೇಂದ್ರ ಕಚೇರಿಯಲ್ಲಿ ರಾಜ್ಯದ ವಿವಿಧ ಭಾಗದ ಹಲವು ಬೋಧಕೇತರ ಹುದ್ದೆಗಳಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಯಂ ಬೋಧಕರಾಗಿ ನೇಮಕವಾಗಿ ಲಕ್ಷಾಂತರ ರು. ಸಂಬಳ ಪಡೆಯುತ್ತಿರುವ ಇವರು ಬೋಧನೆಯ ಕೆಲಸ ಮಾಡಲು ಮೈಗಳ್ಳತನ ತೋರುತ್ತಿದ್ದಾರೆ. ಆಯುಕ್ತರ ಕೇಂದ್ರ ಕಚೇರಿಯಲ್ಲಿ ರಮೇಶ್ ರೆಡ್ಡಿ, ಮಣಿಕಂದನ್ ಹಾಗೂ ಆರ್.ಶ್ರೀಕಾಂತ್ ಸೇರಿದಂತೆ ಇತರರು ಗುಮಾಸ್ತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಕ್ರಮ ವಹಿಸಲಾಗಿಲ್ಲ. ಕೂಡಲೇ ಇದಕ್ಕೆ ಕಡಿವಾಣ ಹಾಕಿ ಬೋಧಕ ವೃತ್ತಿಯಲ್ಲಿ ತೊಡಲು ನಿರ್ದೇಶನ ನೀಡುವಂತೆ ಆಯುಕ್ತರನ್ನು ಒತ್ತಾಯಿಸಿದರು.ಆರ್.ಶ್ರೀಕಾಂತ್, ರಮೇಶ್ ರೆಡ್ಡಿ ಹಾಗೂ ಮಣಿಕಂದನ್ ಸೇರಿದಂತೆ ಇತರರು ಬೋಧಕೇತರ ಕೆಲಸಗಳನ್ನು ಮಾಡದಂತೆ ನೀಡಿದ ಸರ್ಕಾರದ ಆದೇಶವನ್ನು ಅಗೌರವಿಸಿದ್ದಾರೆ. ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುವವ ಎಲ್ಲ ಕಾಯಂ ಬೋಧಕರನ್ನು ವಾರದೊಳಗೆ ಮಾತೃಕಾಲೇಜುಗಳಿಗೆ ವಾಪಸ್ ಕಳುಹಿಸಬೇಕು. ಇಲ್ಲದಿದ್ದರೆ ಬೀದಿ ಹೋರಾಟ ಹಾಗೂ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಆರ್.ಉಮೇಶ್, ಎಸ್.ಕಾರ್ಯದರ್ಶಿ ಹರ್ಷಿತಾ, ನಾಗರಾಜು ಇದ್ದರು.