ಇಂಗ್ಲಿಷ್ ಪುಸ್ತಕಗಳಿಗೆ ಮಾರುಕಟ್ಟೆ ತುಂಬಾ ಚೆನ್ನಾಗಿದೆ. ಆ ಪುಸ್ತಕಗಳಿಗೆ ರಾಯಧನವೂ ಬರಲಿದೆ. ಕನ್ನಡದ ಪುಸ್ತಕಗಳ ಸ್ಥಿತಿ ಹಾಗಿಲ್ಲ. ಓದುಗರ ಮೇಲೆ ನಿರ್ಧಾರವಾಗಲಿದೆ. ಕನ್ನಡ ಪುಸ್ತಕ ಮಾರಾಟದಿಂದ ಶ್ರೀಮಂತನಾಗಲು ಸಾಧ್ಯವಿಲ್ಲ. ನಮ್ಮಲ್ಲಿ ರಾಯಲ್ಟಿ ಕಡಿಮೆ ಇದೆ. ಹಾಗಾಗಿ ಪುಸ್ತಕಗಳಿಂದ ದುಡ್ಡು ಮಾಡಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಪುಸ್ತಕಗಳನ್ನು ಕೊಂಡರೆ ಹಣ ವ್ಯರ್ಥವಾಗುವುದಿಲ್ಲ. ಬದಲಾಗಿ ಜ್ಞಾನ ಹೆಚ್ಚಾಗಲಿದೆ. ಸ್ನೇಹಿತ ಮೋಸ ಮಾಡಿದರೂ ಪುಸ್ತಕ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಲೇಖಕ ಎ.ಆರ್.ಮಣಿಕಾಂತ್ ಹೇಳಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ಕನ್ನಡ ಕರ್ನಾಟಕ ಫೌಂಡೇಷನ್ ಹಾಗೂ ಎಂಪ್ಟಿ ಪಾಕೇಟ್ ಡ್ರೀಮ್ಸ್ ಸಹಯೋಗದೊಂದಿಗೆ ‘ಆಪ್ತ ಸಂವಾದ: ಒಂದು ಪುಸ್ತಕ ಕ್ರಾಂತಿ’ಯಲ್ಲಿ ಭಾಗವಹಿಸಿ ಮಾತನಾಡಿದರು.

ಬೇರೆ ವಸ್ತುಗಳನ್ನು ಕೊಂಡರೆ ಹಣ, ಸಮಯ ವ್ಯರ್ಥವಾಗಬಹುದು. ಆದರೆ, ಪುಸ್ತಕ ಕೊಂಡರೆ ಎಂದಿಗೂ ವ್ಯರ್ಥವಾಗುವುದಿಲ್ಲ. ಎಲ್ಲ ಪುಸ್ತಕಗಳನ್ನೂ ಓದಬೇಕು. ನಾನು ಎಡಪಂಥ, ಬಲಪಂಥ ಪುಸ್ತಕ ಎಂಬುದಿಲ್ಲ. ಕಥೆ, ಹಾಸ್ಯ, ಸಾಹಿತ್ಯ ಸೇರಿದಂತೆ ಎಲ್ಲವನ್ನು ನಾನು ಓದುತ್ತೇನೆ. ಓದುಗರು ಎಲ್ಲ ಪುಸ್ತಕಗಳನ್ನು ಓದಬೇಕು ಎಂದರು.

ಓದುಗರನ್ನು ಹಿಡಿದಿಡುವಂಥ ಬರವಣಿಗೆಗಳು ಬರಬೇಕು. ಪುಸ್ತಕಗಳು ಹೆಚ್ಚು ಮಾರಾಟವಾಗುವುದರಿಂದ ಓದುಗರ ಸಂಖ್ಯೆಯೂ ಹೆಚ್ಚಲಿದೆ. ಆದರೆ, ಪುಸ್ತಕ ಮಾರಾಟದಿಂದ ದುಡ್ಡು ಮಾಡಲು ಸಾಧ್ಯವಿಲ್ಲ. ಪುಸ್ತಕದಿಂದ ಓದುಗರ ಮನಸ್ಸು ಬದಲಾವಣೆಯಾದರೆ ಸಾರ್ಥಕ ಎನಿಸಲಿದೆ ಎಂದರು.

ಇಂಗ್ಲಿಷ್ ಪುಸ್ತಕಗಳಿಗೆ ಮಾರುಕಟ್ಟೆ ತುಂಬಾ ಚೆನ್ನಾಗಿದೆ. ಆ ಪುಸ್ತಕಗಳಿಗೆ ರಾಯಧನವೂ ಬರಲಿದೆ. ಕನ್ನಡದ ಪುಸ್ತಕಗಳ ಸ್ಥಿತಿ ಹಾಗಿಲ್ಲ. ಓದುಗರ ಮೇಲೆ ನಿರ್ಧಾರವಾಗಲಿದೆ. ಕನ್ನಡ ಪುಸ್ತಕ ಮಾರಾಟದಿಂದ ಶ್ರೀಮಂತನಾಗಲು ಸಾಧ್ಯವಿಲ್ಲ. ನಮ್ಮಲ್ಲಿ ರಾಯಲ್ಟಿ ಕಡಿಮೆ ಇದೆ. ಹಾಗಾಗಿ ಪುಸ್ತಕಗಳಿಂದ ದುಡ್ಡು ಮಾಡಲು ಸಾಧ್ಯವಿಲ್ಲ ಎಂದರು.

ನಾನು ಮಂಡ್ಯದವನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ನನ್ನ ಪುಸ್ತಕಗಳಿಂದ ಕೆಲವರ ಜೀವ ಉಳಿಸಿದ ನೆಮ್ಮದಿ ಸಿಕ್ಕಿದೆ. ಕೆಲವರು ಬದಲಾವಣೆಯಾಗಿದ್ದಾರೆ. ನಾನು ಹೋದ ಕಡೆಯಲೆಲ್ಲ ಓದುಗರಿಂದ ಪ್ರೀತಿ ಸಿಕ್ಕಿದೆ. ಕಥೆಗಳನ್ನು ಬರೆಯುವುದು ಕಷ್ಟ. ಕಥೆಗಾರರ ನಡುವೆ ಗುರುತಿಸಿಕೊಳ್ಳುವುದೂ ಕಷ್ಟ. ಬರಹ ಎಂಬುದು ಭಾವುಕತೆ ಇದ್ದಂತೆ. ಆ ಭಾವನೆ ಬರವಣಿಗೆ ಮೂಲಕ ಹೊರಬರಲಿದೆ. ಸ್ಫೂರ್ತಿದಾಯಕ ಕಥೆಗಳಿಗೆ ನಾನು ಹೆಚ್ಚು ಒತ್ತು ನೀಡಿದ್ದೇನೆ. ಒಬ್ಬ ಶ್ರೀಮಂತ ಶ್ರೀಮಂತನಾಗುವುದು ವಿಷಯವೇ ಅಲ್ಲ. ಒಬ್ಬ ಬಡವ ಶ್ರೀಮಂತನಾಗುವುದು ಮುಖ್ಯ ವಿಷಯವಾಗಲಿದೆ. ಆದ್ದರಿಂದ ಸಾಮಾನ್ಯ ವ್ಯಕ್ತಿಗಳ ಸಾಧನೆಯ ಕಥೆಗಳು ಸ್ಫೂರ್ತಿದಾಯಕವಾಗಲಿವೆ ಎಂದರು.

ಕಥೆಗಳನ್ನು ಬರೆಯುತ್ತಾ, ಓದುತ್ತಾ ನಾನೇ ಅದರಲ್ಲಿ ಒಂದು ಪಾತ್ರವಾಗಿ ಬಿಡುತ್ತೇನೆ. ಜೀವನದಲ್ಲಿ ನೋಡಿದ ಘಟನೆಗಳ ಕಥನ ಕಟ್ಟುತ್ತೇನೆ. ಅದು ಓದುಗರಿಗೆ ಸರಳವಾಗಿ ಅರ್ಥವಾಗುವಂತಿರಬೇಕು. ಪದಗಳು ಚಿಕ್ಕದಾಗಿ ಆಕರ್ಷಕವಾಗಿರಬೇಕು. ಒಬ್ಬ ಪತ್ರಕರ್ತ ಹಾಗೂ ಲೇಖಕನಿಗೆ ಬರೆಯುವ ಬರವಣಿಗೆಗಿಂತ ಬರೆದ ಪುಸ್ತಕಗಳ ಓದಿ ಬದಲಾವಣೆ ತರುವ ಉದ್ದೇಶ ಮುಖ್ಯವಾಗುತ್ತದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲೂ ಸ್ಫೂರ್ತಿಯ ಕಥೆಗಳು ಸಾಕಷ್ಟು ಸಿಗುತ್ತಿವೆ. ಇಲ್ಲಿಯೂ ಓದುಗರು ಇದ್ದಾರೆ. ಹಿಂದೆ ನಾನು ಒಬ್ಬನೇ ಬರೆಯುತ್ತಿದ್ದೆ. ಈಗ ಸಾಕಷ್ಟು ಮಂದಿ ಇದ್ದಾರೆ. ಅಂದರೆ ಓದುಗರ ಸಂಖ್ಯೆ ಹೆಚ್ಚಾಗಿದೆ ಎಂಬರ್ಥವಲ್ಲವೇ?. ಆದರೆ, ಪುಸ್ತಕಗಳನ್ನು ಹೊರತರಲು ಖರ್ಚು ಹೆಚ್ಚಾಗಿದೆ. ಆ ಪುಸ್ತಕಗಳಿಂದ ಹಣ ಬಂದರೂ ಖರ್ಚನ್ನು ಸರಿದೂಗಿಸಬೇಕಾಗುತ್ತದೆ. ಕೆಲವೊಮ್ಮೆ ಪ್ರಕಾಶಕರು ಮುದ್ರಣ ಮಾಡಲು ಮುಂದೆ ಬಾರದಿದ್ದಾಗ ನಾವೇ ಮುದ್ರಣ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದರು.

ಆಪ್ತ ಸಂವಾದ ಸಂಸ್ಥಾಪಕ ಎಂ.ಜಿ. ವಿನಯ್‌ಕುಮಾರ್ ಸಂವಾದ ನಡೆಸಿಕೊಟ್ಟರು.