ಸವಣೂರು: ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಡಿ ವಿವಿಧ ವಾರ್ಡ್‌ಗಳಲ್ಲಿ ಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಾಕಿ ಬಿಲ್ ಮೊತ್ತವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಎಸ್.ಸಿ./ಎಸ್.ಟಿ. ಗುತ್ತಿಗೆದಾರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಮಹೇಶ ನಿಡಶೇಷಿ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ಮುಖಂಡರು, ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಸಂಬಂಧಿಸಿದ ಇಲಾಖೆಯ ಅನುಮೋದನೆಯಂತೆ ಸಂಪೂರ್ಣವಾಗಿ ಪೂರ್ಣಗೊಂಡಿವೆ. ಕಾಮಗಾರಿಗಳಿಗೆ ಸಂಬಂಧಿಸಿದ ಅಳತೆ ಪುಸ್ತಕ (ಎಂ-ಬುಕ್), ಬಿಲ್‌ಗಳು ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದ್ದರೂ, ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್ ಮೊತ್ತವನ್ನು ಇದುವರೆಗೆ ಬಿಡುಗಡೆ ಮಾಡದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ದೂರಿದರು.ಬಾಕಿ ಬಿಲ್ ಪಾವತಿಯಲ್ಲಿ ಆಗುತ್ತಿರುವ ವಿಳಂಬದಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕಾರ್ಮಿಕರ ಕೂಲಿ ಪಾವತಿ, ನಿರ್ಮಾಣ ಸಾಮಗ್ರಿಗಳ ಪೂರೈಕೆದಾರರಿಗೆ ಹಣ ಪಾವತಿಸುವುದು ಹಾಗೂ ಬ್ಯಾಂಕ್ ಸಾಲಗಳ ಮರುಪಾವತಿ ಸೇರಿದಂತೆ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವುದೇ ಕಷ್ಟಕರವಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ನ್ಯಾಯಸಮ್ಮತವಾಗಿ ದೊರಕಬೇಕಾದ ಬಾಕಿ ಮೊತ್ತವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡುವುದು ಆಡಳಿತದ ಜವಾಬ್ದಾರಿಯಾಗಿದೆ. ಹೀಗಾಗಿ ಯಾವುದೇ ನೆಪವಿಲ್ಲದೆ ಪೂರ್ಣಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಿ ಗುತ್ತಿಗೆದಾರರಿಗೆ ಪಾವತಿಸಬೇಕು ಎಂದು ಸಂಘ ಒತ್ತಾಯಿಸಿದೆ.ಒಂದು ವೇಳೆ 15 ದಿನಗಳೊಳಗೆ ಬಾಕಿ ಬಿಲ್ ಮೊತ್ತವನ್ನು ಬಿಡುಗಡೆ ಮಾಡದಿದ್ದರೆ, ಗುತ್ತಿಗೆದಾರರು ತಮಟೆ (ಹಲಗಿ) ಬಾರಿಸುವ ಮೂಲಕ ವಿನೂತನ ಹಾಗೂ ಕಾನೂನುಬದ್ಧ ಪ್ರಜಾಪ್ರಭುತ್ವದ ಪ್ರತಿಭಟನೆ ನಡೆಸಲಿದ್ದು, ಅದರೊಂದಿಗೆ ಮುಂದಿನ ಹಂತದ ಹೋರಾಟವನ್ನೂ ರೂಪಿಸಲಾಗುವುದು. ಇದರಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಹುಲ್ಲಮ್ಮನವರ ಪದಾಧಿಕಾರಿಗಳಾದ ಲಕ್ಷ್ಮಣ ಕನವಳ್ಳಿ, ರಾಜೇಶ ವಡ್ಡರ, ಮಂಜುನಾಥ ಮೆಳ್ಳಳ್ಳಿ, ಶಫಿ ಬಾಡ್, ವಿನಯ ಈಳಗೇರ, ಆರ್.ಆರ್ ಪಾಟೀಲ, ಮಿರ್ಜಾ ಉಪಸ್ಥಿತರಿದ್ದರು.