ಬಳ್ಳಾರಿ: ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ಅಪ್ರಾಪ್ತೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಮತ್ತು ಆರೋಪಿಗಳಿಗೆ ಅತ್ಯುಗ್ರ ಶಿಕ್ಷೆಗಾಗಿ ಆಗ್ರಹಿಸಿ ಎಐಎಂಎಸ್ಎಸ್ ಬಳ್ಳಾರಿ ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.ಪಶ್ಚಿಮ ಬಂಗಾಳದ ಬಾರುಪುರ್ ಮತ್ತು ರಾಜಸ್ಥಾನದ ಗಂಗಾನಗರದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ ಘಟನೆಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಪ್ರಪಂಚವನ್ನೇ ಅರಿಯದ 13 ವರ್ಷದ ಅಪ್ರಾಪ್ತ ಹೆಣ್ಣು ಮಗಳ ಮೇಲೆ 30 ನರರಾಕ್ಷಸರು ಅತ್ಯಾಚಾರ ಎಸಗಿದ್ದಾರೆ. ಇಂತಹ ನೀಚ ಘಟನೆಗಳಲ್ಲಿ ಸರ್ಕಾರದ ಯಾವುದೇ ಕಣ್ಣೊರೆಸುವ ತನಿಖೆಯನ್ನಾಗಲಿ ಅಥವಾ ನಿಧಾನಗತಿಯ ಶಿಕ್ಷೆಯನ್ನಾಗಲಿ ಜನರು ಸಹಿಸುವುದಿಲ್ಲ. ಎಲ್ಲ ಆರೋಪಿಗಳಿಗೆ ಅತ್ಯುಗ್ರ ಶಿಕ್ಷೆಗೆ ಗುರಿಪಡಿಸುವ ಖಾತ್ರಿ ನೀಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಕೆ.ಎಂ. ಈಶ್ವರಿ ಆಗ್ರಹಿಸಿದರು.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ 14 ವರ್ಷದ ಅಪ್ರಾಪ್ತ ಬಾಲಕ ಅಶ್ಲೀಲ ಸಿನಿಮಾ ಮತ್ತು ಮದ್ಯ- ಮಾದಕ ವಸ್ತುಗಳಿಗೆ ಬಲಿಯಾಗಿ 9 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತಿದೆ. ಇಂತಹ ಘಟನೆಗಳು ವರದಿಯಾಗದ ದಿನಗಳೇ ಇಲ್ಲ. ಇಂತಹ ಪೈಶಾಚಿಕ ಘಟನೆಗಳಿಗೆ ಕಾರಣ ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಅಶ್ಲೀಲ ಸಿನಿಮಾ-ಸಾಹಿತ್ಯ ಜೊತೆಗೆ ಮದ್ಯ-ಮಾದಕ ವಸ್ತುಗಳಾಗಿವೆ. ಇವುಗಳನ್ನು ಕೂಡಲೇ ನಿಷೇಧಿಸಲು ಹಾಗೂ ದೇಶದಾದ್ಯಂತ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ, ಸಂಘಟನೆಯ ಪದಾಧಿಕಾರಿಗಳಾದ ಪದ್ಮಾ, ಅಹಲ್ಯ, ಗಿರಿಜಾ, ರೇಖಾ, ವಿದ್ಯಾ, ಸೌಮ್ಯ ಮತ್ತಿತರರಿದ್ದರು. ಅಪರ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಕಳುಹಿಸಿಕೊಡಲಾಯಿತು.ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ಅಪ್ರಾಪ್ತೆಯರ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಎಐಎಂಎಸ್‌ಎಸ್ ಸಂಘಟನೆಯ ಪ್ರಮುಖರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.