ಮಂಜುನಾಥ ಕೆ.ಎಂ.

ಬಳ್ಳಾರಿ: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕರ್ನಾಟಕ-ಆಂಧ್ರ ಗಡಿಭಾಗದ ಸಾವಿರಾರು ಗರ್ಭಿಣಿಯರಿಗೆ ಸುರಕ್ಷಿತ ಮಾತೃತ್ವಕ್ಕೆ ವಿಶ್ವಾಸದ ತಾಣವಾಗಿ ಹೊರಹೊಮ್ಮಿದೆ. ಆಧುನಿಕ ವೈದ್ಯಕೀಯ ಸೌಲಭ್ಯಗಳು, ಅನುಭವಿ ವೈದ್ಯರ ತಂಡ ಮತ್ತು ಸಮರ್ಪಿತ ಆರೋಗ್ಯ ಸಿಬ್ಬಂದಿಯ ಸೇವೆಯಿಂದ ಪ್ರತಿದಿನ 12ರಿಂದ 15 ಶಿಶುಗಳ ಜನನ ಇಲ್ಲಿ ನಡೆಯುತ್ತಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಬರೋಬ್ಬರಿ 16 ಸಾವಿರಕ್ಕೂ ಅಧಿಕ ಸುರಕ್ಷಿತ ಹೆರಿಗೆಗಳು ನಡೆದಿವೆ.

ಸುರಕ್ಷಿತ ಹೆರಿಗೆಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ವ್ಯವಸ್ಥೆಗಳು ಒಂದೇ ಸೂರಿನಡಿ ಲಭ್ಯವಿವೆ. ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳಷ್ಟೇ ಅಲ್ಲದೆ, ನೆರೆಯ ವಿಜಯನಗರ, ಕೊಪ್ಪಳ ಹಾಗೂ ಆಂಧ್ರ ಪ್ರದೇಶದ ಗಡಿ ಭಾಗಗಳಿಂದಲೂ ಗರ್ಭಿಣಿಯರು ಸರ್ಕಾರಿ ಜಿಲ್ಲಾಸ್ಪತ್ರೆಗೆ ಆಗಮಿಸುತ್ತಾರೆ.

ಸಮಗ್ರ ಆರೋಗ್ಯಸೇವೆ:

ಗರ್ಭಧಾರಣೆಯ ಆರಂಭದಿಂದ ಹೆರಿಗೆ ನಂತರದ ಆರೈಕೆವರೆಗೆ ತಾಯಂದಿರಿಗೆ ಸಮಗ್ರ ಆರೋಗ್ಯ ಸೇವೆ ನೀಡಲಾಗುತ್ತಿದೆ. ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು 24 ಗಂಟೆಯೂ ವೈದ್ಯರು, ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು ಹಾಗೂ ತರಬೇತಿ ಪಡೆದ ನರ್ಸಿಂಗ್ ಸಿಬ್ಬಂದಿಯಿದೆ. ಅಗತ್ಯವಿದ್ದಾಗ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಸೇರಿದಂತೆ ವಿಶೇಷ ಚಿಕಿತ್ಸಾ ಸೌಲಭ್ಯಗಳೂ ಲಭ್ಯವಿರುವುದರಿಂದ ತಾಯಿ ಮತ್ತು ಮಗುವಿನ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.


ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳ ಬದಲಿಗೆ ಸರ್ಕಾರಿ ಆಸ್ಪತ್ರೆಯನ್ನೇ ಆಯ್ಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದ ವಿವಿಧ ಮಾತೃತ್ವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವೂ ಈ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ. ಆಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಕೇವಲ ಅಂಕಿ-ಅಂಶವಲ್ಲ; ಸರ್ಕಾರಿ ಆರೋಗ್ಯ ಸೇವೆಯ ಮೇಲಿನ ಜನರ ನಂಬಿಕೆ ಗಟ್ಟಿಯಾಗುತ್ತಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯವನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿ ಕಾರ್ಯ ನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಆರೋಗ್ಯ ವ್ಯವಸ್ಥೆಯ ಯಶಸ್ವಿ ಮಾದರಿಯಾಗಿ ರಾಜ್ಯದ ಗಮನ ಸೆಳೆಯುತ್ತಿದೆ.ಹಲವು ಸೌಕರ್ಯಗಳು: ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಲು ವೈದ್ಯಕೀಯ ಸಿಬ್ಬಂದಿ ಮೊದಲ ಆದ್ಯತೆಯಾಗಿ ಪರಿಗಣಿಸುತ್ತದೆ. ಮಗು ಮತ್ತು ತಾಯಿಯ ಜೀವಕ್ಕೆ ಅಪಾಯ ಎಂದು ಕಂಡು ಬಂದಲ್ಲಿ ಮಾತ್ರ ಸಿಸೇರಿಯನ್‌ಗೆ ಮುಂದಾಗುತ್ತಾರೆ. ಕಳೆದ ಮೂರು ವರ್ಷಗಳಲ್ಲಾದ ಹೆರಿಗೆಗಳ ಪೈಕಿ ಸಿಸೇರಿಯನ್ ಸಂಖ್ಯೆ ಹೆಚ್ಚಾಗಿವೆ. ಸಿಟಿ ಸ್ಕ್ಯಾನ್, ಎಂಆರ್‌ಐ, ಮ್ಯಾಮೋಗ್ರಾಫಿ, ಐಸಿಯು, ಎಚ್‌ಡಿ ವಾರ್ಡ್, ಡಿಇಐಸಿ (ಹುಟ್ಟಿದ ಮಕ್ಕಳ ಅಂಗವೈಕಲ್ಯ ಗುರುತಿಸಿ, ಚಿಕಿತ್ಸೆ ನೀಡುವುದು) ಮತ್ತಿತರ ಹೈಟೆಕ್ ಸೌಕರ್ಯಗಳು ಇಲ್ಲಿ ಲಭ್ಯವಿವೆ. ನುರಿತ ವೈದ್ಯಕೀಯ ತಂಡ ಇರುವ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲೆಗೆ ಬರುವ ಐಎಎಸ್‌, ಐಪಿಎಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಹ ಪತ್ನಿಯರ ಹೆರಿಗೆಯನ್ನು ಇಲ್ಲಿಯೇ ಮಾಡಿಸುವುದು ಗಮನಾರ್ಹ ಸಂಗತಿಯಾಗಿದೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 2024ನೇ ಸಾಲಿನಲ್ಲಿ 6891 ಹೆರಿಗೆಗಳಾಗಿದ್ದು, 2025ರಲ್ಲಿ 5301 ಹಾಗೂ 2026ರ ಏಪ್ರಿಲ್ ನಿಂದ ಮಾರ್ಚ್ ಅಂತ್ಯದೊಳಗೆ 4679 ಹೆರಿಗೆಗಳಾಗಿವೆ. ಏಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ 1166 ಹೆರಿಗೆಗಳಾಗಿವೆ.

ಜಿಲ್ಲಾಸ್ಪತ್ರೆಯಲ್ಲಿ 70 ಹೆರಿಗೆ ಬೆಡ್‌ಗಳಿವೆ. ನುರಿತ ವೈದ್ಯರ ತಂಡವಿದೆ. ಸರ್ಕಾರದ ಎಲ್ಲ ಸೌಕರ್ಯಗಳನ್ನು ಬಳಸಿಕೊಂಡು ಸುರಕ್ಷಿತೆ ಹೆರಿಗೆ ಕಡೆ ಗಮನ ನೀಡಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳು ಜಿಲ್ಲಾಸ್ಪತ್ರೆಯಲ್ಲಿರುವುದರಿಂದ ಸಾಕಷ್ಟು ಅನುಕೂಲವಾಗಿದೆ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ.