ಮಾರುಕಟ್ಟೆಯಲ್ಲಿ ‘ಸಿಂದೂರ ಸೀರೆ’ಗೆ ಬೇಡಿಕೆ!

| N/A | Published : May 10 2025, 01:04 AM IST / Updated: May 10 2025, 09:54 AM IST

Film On Operation Sindoor
ಮಾರುಕಟ್ಟೆಯಲ್ಲಿ ‘ಸಿಂದೂರ ಸೀರೆ’ಗೆ ಬೇಡಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

 ಭಾರತೀಯ ಸೇನೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದರಿಂದ ದೇಶದೆಲ್ಲೆಡೆ ವಿಜಯೋತ್ಸವ ಆಚರಿಸಲಾಗುತ್ತಿದೆ. ಇದೆ ವೇಳೆ, ಸಿಂದೂರ ಹೆಸರಿನಲ್ಲಿ ನಡೆಸಿದ ಈ ಕಾರ್ಯಾಚರಣೆ ಇಲ್ಲಿನ ಜವಳಿ ಉದ್ಯಮದಲ್ಲಿ ಈಗ ಹೊಸದೊಂದು ಅಲೆಯನ್ನೇ ಸೃಷ್ಟಿಸಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

 ರಬಕವಿ-ಬನಹಟ್ಟಿ : ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದರಿಂದ ದೇಶದೆಲ್ಲೆಡೆ ವಿಜಯೋತ್ಸವ ಆಚರಿಸಲಾಗುತ್ತಿದೆ. ಇದೆ ವೇಳೆ, ಸಿಂದೂರ ಹೆಸರಿನಲ್ಲಿ ನಡೆಸಿದ ಈ ಕಾರ್ಯಾಚರಣೆ ಇಲ್ಲಿನ ಜವಳಿ ಉದ್ಯಮದಲ್ಲಿ ಈಗ ಹೊಸದೊಂದು ಅಲೆಯನ್ನೇ ಸೃಷ್ಟಿಸಿದೆ.

‘ಸಿಂದೂರ’ ಹೆಸರಿನಲ್ಲಿ ಸೀರೆಗಳು ಈಗ ಮಾರುಕಟ್ಟೆಗೆ ಬರುತ್ತಿದ್ದು, ಈ ಸೀರೆಗಳಿಗೆ ಭಾರೀ ಬೇಡಿಕೆ ಬಂದಿದೆ. ಮಾರುಕಟ್ಟೆಯಲ್ಲಿ ನೆಲೆಯಿಲ್ಲದೇ ಕಂಗಾಲಾಗಿದ್ದ ಜವಳಿ ಉದ್ಯಮಕ್ಕೆ ಇದೀಗ ಸಿಂದೂರ ಹೆಸರಿನ ಸೀರೆಗಳು ಹೊಸ ಉತ್ಸಾಹ ಮೂಡಿಸಿವೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಅವಳಿ ನಗರಗಳು ಜವಳಿ ಉದ್ಯಮಕ್ಕೆ ಹೆಸರುವಾಸಿ. ಆದರೆ, ಕಳೆದ 6-7 ವರ್ಷಗಳಿಂದ ನೂಲು, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸರ್ಕಾರಗಳ ನಿರಾಸಕ್ತಿ, ಕಡಿಮೆ ದರದಲ್ಲಿ ಅನ್ಯ ರಾಜ್ಯಗಳ ಸೀರೆಗಳ ದಾಂಗುಡಿಯಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡ ಇಲ್ಲಿನ ಜವಳಿ ಉದ್ಯಮ ಜೀವಂತ ಶವದಂತಿತ್ತು. ಈಗ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಇಲ್ಲಿನ ನೇಕಾರರು ಸಿಂದೂರ ಹೆಸರಡಿ ಉತ್ತಮ ವಿನ್ಯಾಸ, ಗುಣಮಟ್ಟದ ಸೀರೆಗಳ ನೇಯ್ಗೆಗೆ ಮುಂದಾಗಿದ್ದಾರೆ. ಜತೆಗೆ ಈ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿರುವುದು ಬಸವಳಿದಿದ್ದ ನೇಕಾರಿಕೆಗೆ ಆಮ್ಲಜನಕ ಸಿಕ್ಕಂತಾಗಿದೆ.

ಕೇವಲ ಎರಡೇ ದಿನಗಳಲ್ಲಿ ಕುಂಕುಮ ಬಣ್ಣದ ಸೀರೆಗಳು ಹತ್ತಾರು ವಿನ್ಯಾಸಗಳೊಡನೆ, ವಿವಿಧ ನಕ್ಷೆಗಳಡಿ, ಸಿಂದೂರ ಹೆಸರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ₹600 ರಿಂದ ₹800 ಮೌಲ್ಯದ ಉತ್ಕೃಷ್ಠ ಗುಣಮಟ್ಟ ಮತ್ತು ವಿವಿಧ ವಿನ್ಯಾಸಗಳ ಸೀರೆಗಳು ಮಾರುಕಟ್ಟೆಯಲ್ಲಿ ಮಹಿಳೆಯರ ಮನ ಗೆದ್ದಿದ್ದು, ಸೀರೆಗಳಿಗೆ ಬೇಡಿಕೆ ಹೆಚ್ಚಿಸಿದೆ.

ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳಿಂದಲೂ ಈ ಸೀರೆಗಳಿಗೆ ಬೇಡಿಕೆ ಬಂದಿದ್ದು, ಬೇಡಿಕೆ ಪೂರೈಸಲು ಉದ್ಯಮಿಗಳು ಸಜ್ಜಾಗಿದ್ದಾರೆ. ಹೊಸ ವಿನ್ಯಾಸದ ಈ ಸೀರೆಗಳು ಸದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಸೀರೆಗಳ ಸಂಗ್ರಹ ಮಾಡಿಕೊಂಡು ರಫ್ತು ಮಾಡಲಾಗುವುದು ಎಂದು ಉದ್ಯಮಿ ರವಿ ಕರ್ಲಟ್ಟಿ ತಿಳಿಸಿದ್ದಾರೆ.

ಈ ಕಾರ್ಯಾಚರಣೆ ಇಲ್ಲಿನ ಜವಳಿ ಉದ್ಯಮಕ್ಕೆ ಹೊಸ ಬೆಳಕು ತಂದಿದೆ ಎಂದು ಉದ್ಯಮಿಗಳಾದ ಜಯಪ್ರಕಾಶ ಸೊಲ್ಲಾಪುರ, ರವಿ ದೇಸಾಯಿ, ಪ್ರಶಾಂತ ಪಾಲಭಾಂವಿ, ವಿನೋದ ಸಿಂದಗಿ ಎಂಬುವರು ಹರ್ಷ ವ್ಯಕ್ತಪಡಿಸುತ್ತಾರೆ.