ಸಾರಾಂಶ
ಪ್ರತಿಭಟನೆ । ಬಿಜೆಪಿ ನಗರ ಮಂಡಲದಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ । ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ
ಕನ್ನಡಪ್ರಭ ವಾರ್ತೆ ಸಾಗರಪಟ್ಟಣದ ಸಾಗರ ಹೋಟೆಲ್ ವೃತ್ತದಲ್ಲಿ ಮಂಗಳವಾರ ಬಿಜೆಪಿ ನಗರ ಮಂಡಲ ವತಿಯಿಂದ ಐಪಿಎಸ್ ಅಧಿಕಾರಿ ಮೇಲೆ ಕೈಮಾಡಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರತಿಭಟನೆ ನಡೆಯಿತು
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಐಪಿಎಸ್ ಅಧಿಕಾರಿ ಮೇಲೆ ಕೈಮಾಡಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸುಮೋಟೋ ಕೇಸ್ ದಾಖಲಿಸುವಂತೆ ಒತ್ತಾಯಿಸಿದರು.ರಕ್ಷಣಾ ವ್ಯವಸ್ಥೆಗೆ ನಿಂತಿದ್ದ ಎಎಸ್‌ಪಿ ಅವರಿಗೆ ಕಪಾಳಮೋಕ್ಷ ಮಾಡಲು ಕೈಎತ್ತಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಸುಮೋಟೋ ಕೇಸ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದ್ದು, ಪೊಲೀಸ್ ವ್ಯವಸ್ಥೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಕೆಲಸವನ್ನು ರಕ್ಷಣಾ ಇಲಾಖೆ ಮಾಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ಒಬ್ಬ ಅವಿವೇಕಿಯಂತೆ ವರ್ತಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ೭೫೦ ಕಿ.ಮೀ. ಅಂತರವಿದ್ದು, ಪಹಲ್ಗಾಮ್ ಉಗ್ರದಾಳಿಗೆ ಭದ್ರತಾ ಲೋಪ ಕಾರಣ ಎಂದು ಹೇಳುತ್ತಿದ್ದಾರೆ. ಕೇವಲ ೭೫೦ ಮೀ. ದೂರದಲ್ಲಿ ಇವರ ವಿರುದ್ದ ಧಿಕ್ಕಾರ ಕೂಗಿದ್ದನ್ನು ರಕ್ಷಣಾ ವ್ಯವಸ್ಥೆಯಿಂದ ತಡೆಯಲು ಆಗಲಿಲ್ಲ. ಹಾಗಾದರೆ ಇದು ಯಾವ ವೈಫಲ್ಯ ಎನ್ನುವುದನ್ನು ಸಿದ್ದರಾಮಯ್ಯ ತಿಳಿಸಬೇಕು. ಪದೇಪದೇ ಪಾಕಿಸ್ತಾನದ ಬಗ್ಗೆ ಮೃದುಧೋರಣೆ ತಳೆಯುವ ಹೇಳಿಕೆ ನೀಡುವ ಮೂಲಕ ಭಾರತೀಯ ಯೋಧರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಸಿದ್ದರಾಮಯ್ಯ ರಾಜಕಾರಣದ ಪ್ರಾರಂಭ ದಿನದಿಂದ ಈತನಕ ಅಧಿಕಾರಿಗಳ ಮೇಲಿನ ದರ್ಪ ಕಡಿಮೆಯಾಗಿಲ್ಲ. ಅಧಿಕಾರಿಗಳು ಇಂಥವರನ್ನು ಓಲೈಕೆ ಮಾಡುವುದನ್ನು ಮೊದಲು ಬಿಡಬೇಕು. ರಕ್ಷಣಾ ಇಲಾಖೆ ನಮ್ಮ ರಾಜ್ಯದ ಹೆಮ್ಮೆಯಾಗಿದೆ. ರಕ್ಷಣಾ ಇಲಾಖೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕೈಎತ್ತುವ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮುಖ್ಯಮಂತ್ರಿಗಳು ಮಾಡಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷ ಮತ್ತು ಅದನ್ನು ಮುನ್ನಡೆಸುವವರ ದುರಾಡಳಿತ ಮಿತಿ ಮೀರಿದೆ. ಒಬ್ಬ ಐಪಿಎಸ್ ಅಧಿಕಾರಿ ಮೇಲೆ ಕಪಾಳಮೋಕ್ಷಕ್ಕೆ ಕೈಎತ್ತಿದ ಸಿದ್ದರಾಮಯ್ಯ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಆರ್., ಪರಶುರಾಮ್, ಮಧುರಾ ಶಿವಾನಂದ್ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಭಾವನಾ ಸಂತೋಷ್, ಪ್ರೇಮ ಸಿಂಗ್, ಪ್ರಮುಖರಾದ ಕೃಷ್ಣ ಶೇಟ್, ಸತೀಶ್ ಕೆ., ರಾಯಲ್ ಸಂತೋಷ್, ಸತೀಶಬಾಬು, ಸಂತೋಷ್ ಶೇಟ್, ಮಹೇಶ್ ಎಂ.ಆರ್., ಶಿವಶಂಕರ್ ಇತರರು ಹಾಜರಿದ್ದರು.