ಸಾರಾಂಶ
Maharathotsava of Channagiri Urabagila Sri Anjaneyaswamy
-ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆ ರಥೋತ್ಸವ, ದೇವತಾ ಕಾರ್ಯಕ್ರಮ
----ಕನ್ನಡಪ್ರಭವಾರ್ತೆ ಚನ್ನಗಿರಿ
ಊರಬಾಗಿಲ ಶ್ರೀಆಂಜನೇಯಸ್ವಾಮಿಯ ಮಹಾರಥೋತ್ಸವ ನೂರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ರಥೋತ್ಸವದ ನಿಮಿತ್ತ ಕಳೆದ ಏಪ್ರೀಲ್ 28ನೇ ತಾರೀಖಿನಿಂದಲೇ ವಿವಿಧ ದೇವತಾ ಕಾರ್ಯಕ್ರಮಗಳು ಆರಂಭಗೊಂಡು ಪುಣ್ಯಾಹ ವಾಚನ, ಅಂಕುರಾರ್ಪಣ, ರಕ್ಷಾಬಂಧನ, ಕಲಶಾರಾಧನೆ, ಮಾತೃಕಾಪೂಜೆ, ನವಗ್ರಹಪೂಜೆ, ಧ್ವಜಾರೋಹಣ ನಡೆದು ಮಹಾರಥೋತ್ಸವದ ಅಂಗವಾಗಿ ಬೆಳ್ಳಿಗ್ಗೆಯಿಂದಲೇ ಶ್ರೀಆಂಜನೇಯಸ್ವಾಮಿಗೆ ಅಭಿಷೇಕ, ಹೂವಿನ ಅಲಂಕಾರ, ದೇವತಾ ಹೋಮ, ಪೂರ್ಣಾಹುತಿ, ರಥ ಸಂಪ್ರೋಕ್ಷಣೆ, ಮಂತ್ರ ಪುಪ್ಪ, ಅಷ್ಟಾವಧಾನ, ಸುಮುಹೊರ್ತದಲ್ಲಿ ರಥಾರೋಹಣವನ್ನು ನಡೆಸಲಾಯಿತು.
ಪೂಜಾ ಕೈಕರ್ಯಗಳು ನಡೆದ ನಂತರ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಶ್ರೀಆಂಜನೇಯಸ್ವಾಮಿಯ ಉತ್ಸವಮೂರ್ತಿಯನ್ನು ಕುಳ್ಳಿರಿಸಿಕೊಂಡು ಗೋವಿಂದನ ನಾಮಸ್ಮರಣೆಯೊಂದಿಗೆ ಪಲ್ಲಕ್ಕಿಯನ್ನು ಹೊತ್ತು ತಂದ ಭಕ್ತರು ರಥಕ್ಕೆ ಪ್ರದಕ್ಷಣೆ ಹಾಕಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸುತ್ತಿದ್ದಂತೆಯೇ ಭಕ್ತಿ ಪರವಶರಾಗಿ ಭಕ್ತರು ರಥ ಎಳೆದರು.ಭಕ್ತಾಧಿಗಳು ರಥದ ಮೇಲೆ ಬಾಳೆಹಣ್ಣು, ಮಂಡಕ್ಕಿಯನ್ನು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ರಥೋತ್ಸವದ ನಂತರ ಬಂದಿದ್ದ ಎಲ್ಲಾ ಭಕ್ತಾದಿಗಳಿಗೂ ಪಾನಕ-ಕೊಸಂಬರಿಯನ್ನು ವಿತರಿಸಲಾಯಿತು.ಈ ರಥೋತ್ಸವಕ್ಕೆ ಪಟ್ಟಣದ ಭಕ್ತಾಧಿಗಳು ಸೇರಿದಂತೆ ಸುತ್ತ-ಮುತ್ತಲ ಗ್ರಾಮಗಳ ಭಕ್ತಾಧಿಗಳು ಭಾಗವಹಿಸಿ ದೇವರ ದರ್ಶನ ಪಡೆದರು.
--ಪೋಟೋ: 30ಕೆಸಿಎನ್ಜಿ1
ಊರಬಾಗಿಲ ಶ್ರೀಆಂಜನೇಯಸ್ವಾಮಿಯ ಮಹಾರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.