ನಗರದ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಬೇಕು ಎಂದು ಸ್ಲಂಜನರ ಸಂಘಟನೆ-ಕರ್ನಾಟಕದ ವಿಜಯನಗರ ಜಿಲ್ಲಾ ಸಮಿತಿ ಒತ್ತಾಯಿಸಿದೆ. ವಾರದೊಳಗೆ ಹಕ್ಕುಪತ್ರ ವಿತರಿಸದಿದ್ದರೆ, ಡಿ .23 ರಂದು ಸ್ಲಂ ಬೋರ್ಡ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದೆ.
ಹೊಸಪೇಟೆ: ನಗರದ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಬೇಕು ಎಂದು ಸ್ಲಂಜನರ ಸಂಘಟನೆ-ಕರ್ನಾಟಕದ ವಿಜಯನಗರ ಜಿಲ್ಲಾ ಸಮಿತಿ ಒತ್ತಾಯಿಸಿದೆ. ವಾರದೊಳಗೆ ಹಕ್ಕುಪತ್ರ ವಿತರಿಸದಿದ್ದರೆ, ಡಿ .23 ರಂದು ಸ್ಲಂ ಬೋರ್ಡ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದೆ.
ಸ್ಥಳೀಯ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸ್ಲಂ ಜನರ ಸಂಘಟನೆ ಕರ್ನಾಟಕದ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್. ಶೇಷು ಹಾಗೂ ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್ ಮಾತನಾಡಿ, ಸ್ಥಳೀಯ ಸ್ಲಂ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸುವಲ್ಲಿ ಸರ್ಕಾರ, ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. 2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಕ್ಕುಪತ್ರ ನೀಡಿದ್ದು, ಬಿಟ್ಟರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಕಳೆದರೂ ಒಂದು ಹಕ್ಕು ಪತ್ರವನ್ನು ಕೂಡ ಜಿಲ್ಲೆಯಲ್ಲಿ ವಿತರಿಸಿಲ್ಲ. ಇದರಿಂದಾಗಿ ಸ್ಲಂ ಜನರು ಭೂಮಿ ಹಕ್ಕನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಭೂ ಮಾಲೀಕತ್ವವನ್ನು ಸಹ ಪಡೆಯಲು ಆಗುತ್ತಿಲ್ಲ. ಸ್ಲಂ ಜನರನ್ನು ರಾಜಕೀಯ ಪಕ್ಷಗಳು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದಲ್ಲಿ ಏಳು ಸಾವಿರಕ್ಕೂ ಹೆಚ್ಚು ಹಕ್ಕು ಪತ್ರಗಳು ವಿತರಣೆಯಾಗಿದ್ದು, ಇ- ಸ್ವತ್ತು ಮೂಲಕ ನೋಂದಣಿ ಆದಲ್ಲಿ ಮಾತ್ರ ಸ್ಲಂ ಜನರಿಗೆ ಭೂಮಿಯ ಮಾಲೀಕತ್ವದ ಹಕ್ಕು ಸಿಗುತ್ತದೆ. ಸದ್ಯ ಸರ್ಕಾರಿ ಮಾಲೀಕತ್ವದಲ್ಲಿರುವ ಸ್ಲಂ ನಿವಾಸಿಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗುತ್ತಿದ್ದು, 2 ಸಾವಿರಕ್ಕೂ ಹೆಚ್ಚು ಹಕ್ಕು ಪತ್ರಗಳು ಸಿದ್ಧ ಇವೆ. ಅವುಗಳ ವಿತರಣೆ ಮಾತ್ರ ವಿಳಂಬವಾಗುತ್ತಿದೆ. ನಗರದಲ್ಲಿ ಹಕ್ಕು ಪತ್ರಗಳ ವಿತರಣೆಗೆ ಕಳೆದ ಅ. 18ರಂದು ದಿನಾಂಕ ನಿಗದಿಪಡಿಸಿ ನಂತರ ಕಾರ್ಯಕ್ರಮ ರದ್ದು ಮಾಡಲಾಗಿದೆ. ಇದರಂತೆ ಹಲವು ಬಾರಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಕಾರಣವಿಲ್ಲದೆ ಮುಂದೂಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ನಾಲ್ಕೂವರೆ ಸಾವಿರ ಸ್ಲಂಗಳಿದ್ದು ಏಳೂವರೆ ಲಕ್ಷ ಕುಟುಂಬಗಳು ಖಾಸಗಿ ಸ್ಲಮ್ ನಲ್ಲಿ ವಾಸಿಸುತ್ತಿವೆ. ರಾಜ್ಯದ ನಗರಗಳ ಜನಸಂಖ್ಯೆಯ ಶೇ. 25ರಷ್ಟು ಸ್ಲಂ ನಿವಾಸಿಗಳಾಗಿದ್ದಾರೆ. ಆದರೆ ನಮಗೆ ಸಿಕ್ಕ ಪ್ರಸ್ತುತ ಭೂಮಿಯ ಪ್ರಮಾಣ 0.04 ಮಾತ್ರ. ಇದು ನಮ್ಮನ್ನು ಮತ್ತಷ್ಟು ವಂಚಿಸಿದೆ. 1973ರ ಸ್ಲಂ ಕಾಯ್ದೆ ನಮಗೆ ಅನೇಕ ಹಕ್ಕುಗಳನ್ನು ನೀಡಿದೆ. ಆ ಕಾಯ್ದೆಯ ಅಡಿಯಲ್ಲಿಯೇ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಭಿಕ್ಷೆಯನ್ನಲ್ಲ ಎಂದರು.
ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಅಡಿಯಲ್ಲಿ 1230 ಮನೆಗಳು ಮಂಜೂರಾಗಿದ್ದು, ಇದರಲ್ಲಿ 800ಕ್ಕೂ ಅಧಿಕ ಮನೆಗಳ ಪೈಕಿ ಬಹುತೇಕ ಮುಕ್ತಾಯಗೊಂಡಿದ್ದರೆ, ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಇದ್ದ ಮನೆಯನ್ನು ಕೆಡವಿ ಸ್ಲಂ ಮನೆ ಕಟ್ಟಲು ಆರಂಭಿಸಿದ ನಿವಾಸಿಗಳು ಈಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಸರ್ಕಾರವು ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ ಎನ್ನುವ ಕಾರಣಕ್ಕಾಗಿ ಈ ಯೋಜನೆಯ ಗುತ್ತಿಗೆ ಪಡೆದವರು ಕಾಮಗಾರಿಯನ್ನು ನಿಲ್ಲಿಸಿ ತಮ್ಮ ಕಚೇರಿಯನ್ನು ಬಂದು ಮಾಡಿ ಹೋಗಿದ್ದಾರೆ. ಈ ವಿಷಯವಾಗಿ ಶಾಸಕರು, ಸಚಿವರು ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸ್ಲಂಜನರನ್ನು ನಿರ್ಲಕ್ಷಿಸಿಸಲಾಗಿದೆ ಎಂದರು.ಸ್ಲಂ ಸಂಘಟನೆ ಉಪಾಧ್ಯಕ್ಷ ತನ್ವೀರ್, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಮಹಿಳಾ ಘಟಕದ ಉಪಾಧ್ಯಕ್ಷೆ ನೂರ್ ಜಹಾನ್, ಪ್ರ. ಕಾರ್ಯದರ್ಶಿ ಬೀನಾ ರೂಪಲತಾ, ಜಾಫ್ರೀನ್, ಮುಖಂಡರಾದ ರಾಮಚಂದ್ರ ಬಾಬು, ವಿಜಯ್‌ಕುಮಾರ್, ಜಗನ್, ಶೇಕ್ ಮೆಹಬೂಬ್ ಬಾಷಾ, ಈರಣ್ಣ, ಹೊನ್ನಪ್ಪ ಹನುಮಂತ, ಮಾನಸಯ್ಯ, ಕರಿಯಪ್ಪ, ಕಾರ್ತಿಕ್, ಕಾಗಿ ಉಮೇಶ್ ಮತ್ತಿತರರಿದ್ದರು.