ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿದ್ಯುತ್ ಬಿಲ್ ಬಾಕಿ ಇರುವ ಕಾರಣ ತುಂಗಾ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರನ್ನು ಹರಿಸಲು ಆಗುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ಲನ್ನು ನೀಡಿ ನೀರು ತುಂಬಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.ತುಂಗಾ ಏತ ನೀರಾವರಿ ಯೋಜನೆ ಜಿಲ್ಲೆಯಲ್ಲಿ ರೈತರಿಗೆ ಬಹು ಉಪಯೋಗಿಯಾಗಿದ್ದು, ತಾಲೂಕಿನ ಹಾಯ್‌ಹೊಳೆ, ಬಾರೆಹಳ್ಳ, ಗೌಡನಕೆರೆಗಳ ಮೂಲಕ ಸುಮಾರು 7.5 ಸಾವಿರ ಎಕರೆಗೆ ನೀರು ಹರಿಸಲಾಗುತ್ತದೆ. ಸುಮಾರು ೨೮ಕ್ಕೂ ಹೆಚ್ಚು ಹಳ್ಳಿಗಳು ಇದರ ಪ್ರಯೋಜನ ಪಡೆಯುತ್ತವೆ. ಕಳೆದ 8 ವರ್ಷಗಳಿಂದ ಈ ಯೋಜನೆ ಚಾಲನೆಯಲ್ಲಿದೆ. ಆದರೆ ರಾಜ್ಯ ಸರ್ಕಾರ ಮೆಸ್ಕಾಂ ಇಲಾಖೆಗೆ ಸುಮಾರು 25.22 ಕೋಟಿ ರು. ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಿಕೊಂಡಿದೆ. ಆದ್ದರಿಂದ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದಾರೆ ಎಂದು ದೂರಿದರು.
ಜೂನ್‌ನಿಂದ ಡಿಸೆಂಬರ್ ವರೆಗೆ 6 ತಿಂಗಳ ಕಾಲ ನೀರು ಎತ್ತಲು ಅವಕಾಶವಿದೆ. ಈಗ ನದಿಯಲ್ಲಿ ನೀರು ಹರಿಯುತ್ತಿದೆ ಕೂಡ. ಆದರೆ ಜಾಕ್‌ವೆಲ್‌ನಿಂದ ವಿದ್ಯುತ್ ಸಂಪರ್ಕವಿಲ್ಲದೆ ನೀರನ್ನು ಎತ್ತುವುದು ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರ ಕೂಡಲೇ ಬಾಕಿ ಬಿಲ್ಲನ್ನು ಪಾವತಿ ಮಾಡಿ ನೀರು ತುಂಬಲು ಅವಕಾಶ ಮಾಡಿಕೊಟ್ಟು ಆ ಭಾಗದ ರೈತರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.ಮನವಿ ನೀಡುವ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾನಾಯ್ಕ ಪ್ರಮುಖರಾದ ಕೆ. ರಾಘವೇಂದ್ರ, ಭಾಗ್ಯ ರಾಘವೇಂದ್ರ, ಹಿಟ್ಟೂರು ರಾಜು, ಎಂ.ಡಿ. ನಾಗರಾಜ್, ಕಸೆಟ್ಟಿ ರುದ್ರೇಶ್, ಪಿ.ಡಿ. ಮಂಜಪ್ಪ, ಇ.ವಿ. ಜಗದೀಶ್, ಸಿ.ಬಿ. ಹನುಮಂತಪ್ಪ, ಜಿ.ಎನ್. ಪಂಚಾಕ್ಷರಿ, ಸಿ.ಪಿ.ನಾಗಾರಾಜ್, ಕೆ.ಎನ್. ಜ್ಞಾನೇಶ್ ಸೇರಿದಂತೆ ಹಲವರಿದ್ದರು.
------------
ಪೊಟೋ: 06ಎಸ್‌ಎಂಜಿಕೆಪಿ06
ತುಂಗಾ ಏತ ನೀರಾವರಿ ಯೋಜನೆಗೆ ಕೂಡಲೇ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ಲನ್ನು ನೀಡಿ ನೀರು ತುಂಬಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.