ಕಂಪ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ತೀರ್ಮಾನವನ್ನು ಸಂವಿಧಾನದ ಶೆಡ್ಯೂಲ್-9ಕ್ಕೆ ಸೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ್ ಒತ್ತಾಯಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದ ವಾಲ್ಮೀಕಿ ಜಯಂತ್ಯುತ್ಸವದ ಅಂಗವಾಗಿ ತಹಸೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಕೈಗೊಂಡ ತೀರ್ಮಾನಕ್ಕೆ ಕಾನೂನುಬದ್ಧ ರಕ್ಷಣೆ ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ಮೀಸಲಾತಿ ಹೆಚ್ಚಳದ ತೀರ್ಮಾನವನ್ನು ಸಂವಿಧಾನದ ಶೆಡ್ಯೂಲ್-9ಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಮುದಾಯಗಳ ಹಿತದೃಷ್ಟಿಯಿಂದ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳನ್ನು ಒಳಗೊಂಡ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕರೆದೊಯ್ದು ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ತೀರ್ಪಿನಿಂದ ಉಂಟಾಗಿರುವ ಕಾನೂನು ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಅಗತ್ಯ ಕಾನೂನು ಪರಿಹಾರ ಪಡೆಯಲು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆಯುವ ನಿಟ್ಟಿನಲ್ಲಿಯೂ ಸರ್ಕಾರ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.ವಾಲ್ಮೀಕಿ ಮಹರ್ಷಿಗೆ ಪೂಜೆ: ವಾಲ್ಮೀಕಿ ಜಯಂತ್ಯುತ್ಸವದ ಅಂಗವಾಗಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಸೋಮವಾರ ವಾಲ್ಮೀಕಿ ಮಹರ್ಷಿಯ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷ ವಾಲ್ಮೀಕಿ ಈರಣ್ಣ, ಬಿ.ನಾರಾಯಣಪ್ಪ, ಎನ್.ರಾಮಾಂಜನೇಯಲು, ವಾಲ್ಮೀಕಿ ರಘುನಾಯಕ, ಬಿ.ವೆಂಕಟೇಶ್, ಹೊನ್ನೂರಪ್ಪ, ನಾಗಪ್ಪ, ಈರಣ್ಣ, ನಾಗರಾಜ, ದುರುಗಪ್ಪ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.