ಉತ್ತರ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಮಿತಿಮೀರಿದ್ದು, ಸಂಚಾರ ದಟ್ಟಣೆ ಹಾಗೂ ಚಾಲಕರ ಬದುಕು ದುಸ್ತರವಾಗುತ್ತಿದೆ.

ಆಟೋ ಹೊಸ ಪರ್ಮಿಟ್‌ಗೆ ಬ್ರೇಕ್ ಹಾಕದಿದ್ದರೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ: ಶೇಖರಯ್ಯ ಮಠಪತಿ

ಕನ್ನಡಪ್ರಭ ವಾರ್ತೆ ​ಕಾರವಾರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಮಿತಿಮೀರಿದ್ದು, ಸಂಚಾರ ದಟ್ಟಣೆ ಹಾಗೂ ಚಾಲಕರ ಬದುಕು ದುಸ್ತರವಾಗುತ್ತಿದೆ. ಈ ಹಿನ್ನೆಲೆ ಮುಂದಿನ ಐದು ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ತಡೆಹಿಡಿಯಬೇಕು ಹಾಗೂ ಹಾಲಿ ಇರುವ ಪರ್ಮಿಟ್ ವ್ಯಾಪ್ತಿಯನ್ನು ಕನಿಷ್ಠ 50 ಕಿಲೋಮೀಟರ್‌ಗೆ ವಿಸ್ತರಿಸಬೇಕು ಎಂದು ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.

​ಈ ಕುರಿತು ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಟೋ ಚಾಲಕರು ಕಾರು ಮಾಲೀಕರಷ್ಟೇ, ಅಂದರೆ ಸುಮಾರು ₹8,000 ವಿಮೆ ಪಾವತಿಸುತ್ತಾರೆ. ಆದರೆ ಕಾರುಗಳಿಗೆ ರಾಜ್ಯದಾದ್ಯಂತ ಸಂಚರಿಸಲು ಅವಕಾಶವಿದ್ದರೆ, ಆಟೋಗಳಿಗೆ ನಗರದಲ್ಲಿ 7 ಕಿಮೀ ಮತ್ತು ಗ್ರಾಮೀಣ ಭಾಗದಲ್ಲಿ 3 ಕಿಮೀ ಮಿತಿ ಹೇರಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು. ಸಿಎನ್‌ಜಿ ತುಂಬಿಸಲು 20-30 ಕಿಮೀ ದೂರ ಹೋಗಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಪರ್ಮಿಟ್ ವ್ಯಾಪ್ತಿ ಮೀರಿ ಹೋಗುವಾಗ ಅಪಘಾತ ಸಂಭವಿಸಿದರೆ, ವಿಮೆ ಸೌಲಭ್ಯ ಸಿಗದೆ ಬಡ ಚಾಲಕರ ಕುಟುಂಬಗಳು ಬೀದಿಗೆ ಬರುತ್ತಿವೆ. ಆದ್ದರಿಂದ ಉಡುಪಿ, ಮಂಗಳೂರು ಮತ್ತು ಕೇರಳ ಮಾದರಿಯಲ್ಲಿ ಪರ್ಮಿಟ್ ವ್ಯಾಪ್ತಿ ವಿಸ್ತರಿಸಲೇಬೇಕು. ಅಲ್ಲದೇ ಆಟೋ ಚಾಲಕರಿಗೆ ಎನ್.ಟಿ ಹಾಗೂ ಬ್ಯಾಡ್ಜ್ ಚಾಲನಾ ಪರವಾನಗಿ ನೀಡಲಾಗುತ್ತಿದ್ದು, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಹಲವರಿಗೆ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಎಲ್ಲಾ ಚಾಲನಾ ಪರವಾನಗಿಯನ್ನೂ ಒಂದೇ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಆಟೋ ಚಾಲಕರ ದುಡಿಮೆ ಪಾತಾಳಕ್ಕೆ ಕುಸಿದಿದೆ. ದಿನಕ್ಕೆ ಕನಿಷ್ಠ ₹300 ದುಡಿಯುವುದು ಕೂಡ ಕಷ್ಟಕರವಾಗಿದೆ. ಹೀಗಾಗಿ ನಗರ ಸಾರಿಗೆಯಲ್ಲಿ ಶಕ್ತಿ ಯೋಜನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಜೊತೆಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಆಟೋ ಚಾಲಕರಿಗೂ ಪ್ರತ್ಯೇಕ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಿ, ಆಟೋ ಚಾಲಕರು ಕಟ್ಟುವ ಹಸಿರು ತೆರಿಗೆಯಲ್ಲಿ ಬಜೆಟ್‌ನಲ್ಲಿ ₹500 ಕೋಟಿ ಅನುದಾನ ಮೀಸಲಿಡಬೇಕು. ಅಲ್ಲದೆ, ಅಪಘಾತದಲ್ಲಿ ಮೃತಪಟ್ಟ ಚಾಲಕರ ಕುಟುಂಬಕ್ಕೆ ಲೈಸೆನ್ಸ್ ಸ್ವರೂಪ ನೋಡದೆ ₹5 ಲಕ್ಷ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ​ಸಮಸ್ಯೆಗಳ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಕೂಡಲೇ ಸ್ಪಂದಿಸದಿದ್ದರೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ಅವರು ಎಚ್ಚರಿಕೆ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ವಿಶ್ವನಾಥ ಗೌಡ, ಜಿಲ್ಲೆಯಲ್ಲಿ ಈಗಾಗಲೇ 7,000ಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿವೆ. ಹೊರ ಜಿಲ್ಲೆಯವರು ಬಂದು ಇಲ್ಲಿ ಪರ್ಮಿಟ್ ಪಡೆಯುತ್ತಿದ್ದು, ಒಬ್ಬರ ಹೆಸರಿನಲ್ಲೇ 8 ರಿಂದ 10 ಪರ್ಮಿಟ್ ಇರುವಂತಹ ಅವ್ಯವಹಾರಗಳು ಎಗ್ಗಿಲ್ಲದೆ ಸಾಗಿವೆ ಎಂದು ಆರೋಪ ಮಾಡಿದರು

ಖಜಾಂಚಿ ಶಿವರಾಜ ಮೇಸ್ತ ಮಾತನಾಡಿದರು. ಸುದ್ದಿಗೋಷ್ಠಿಗೂ ಮುನ್ನ ರಿಕ್ಷಾ ಚಾಲಕ, ಮಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಉದಯ ಮೇಸ್ತಾ, ಶ್ರೀಧರ ನಾಯ್ಕ, ಚಂದ್ರಕಾಂತ ನಾಯ್ಕ, ಮಹೇಶ ನಾಯ್ಕ ಸೇರಿ ಇತರರಿದ್ದರು.