ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಐತಿಹಾಸಿಕ ಮೈಸೂರು ಮಹಾರಾಜರ ಕಾಲದ ಪಾರಂಪರಿಕ ಮೂಲೆ ಮಂಟಪವನ್ನು ಧ್ವಂಸ ಮಾಡಿ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ನಾಗರೀಕರು ಪ್ರತಿಭಟನೆ ನಡೆಸಿದರು.ತಾಲೂಕಿನ ಕಿರಂಗೂರು ಮತ್ತು ದರಸಗುಪ್ಪೆ ಗ್ರಾಮಗಳ ನಡುವಿನ ಹೆದ್ದಾರಿ ಪಕ್ಕದಲ್ಲೇ ಇದ್ದ ಮಂಟಪವನ್ನು ಕಳೆದ ಮೂರ್‍ನಾಲ್ಕು ದಿನಗಳ ಹಿಂದೆ ರಾತ್ರಿ ವೇಳೆ ಕಿಡಿಗೇಡಿಗಳು ನಾಶ ಮಾಡಿದ್ದು, ನೂರಾರು ವರ್ಷಗಳ ಇತಿಹಾಸವಿರುವ ಮಂಟಪ ನಾಶ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಚೇತನಾ ಯಾದವ್ ಹಾಗೂ ವೃತ್ತ ನಿರೀಕ್ಷಕ ಬಿ.ಜಿ.ಕುಮಾರ್ ಪ್ರತಿಭಟನಾಕಾರರ ಮನವೊಲಿಸಿ 15 ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಮಂಟಪ ನಾಶ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ತಮ್ಮಗಳ ಬೇಡಿಕೆಯಂತೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪುನರ್ ಮಂಟಪ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.ಈ ಸಂಬಂಧ ಕಳೆದ ಗುರುವಾರವೂ ಸಹ ಡಿವೈಎಸ್ಪಿ ಕೃಷ್ಣಮೂರ್ತಿ ಅವರಿಗೂ ಸಹ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಹೆದ್ದಾರಿ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮಂಟಪ ನಾಶವಾಗಿದೆಯೇ ಎಂಬ ಬಗ್ಗೆಯೂ ಸಹ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿ ಮಂಟಪ ನೆಲಸಮವಾಗಿರುವುದಕ್ಕೂ ಹೆದ್ದಾರಿ ನಿರ್ಮಾಣ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ. ಬದಲಾಗಿ ಇಲ್ಲಿನ ಖಾಸಗಿ ಜಮೀನಿನ ರಸ್ತೆಗೆ ಮಂಟಪ ಅಡ್ಡಲಾಗಿದೆ ಎಂಬ ಪಟ್ಟಭದ್ರ ಹಿತಾಸಕ್ತಿಗಳು ಈ ಕೆಲಸ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಕದಂಬಪಡೆ ಜಿಲ್ಲಾಧ್ಯಕ್ಷ ರುಕ್ಮಾಂಗಧ, ದರಸಗುಪ್ಪೆ ಸಾಗರ್, ನವೀನ್‌ಕುಮರ್, ಮಂಜುನಾಥ್, ಪರಮೇಶ್, ಗಂಜಾಂ ಅಭಿ, ಕೇಶವ, ಕಿರಂಗೂರು ಅಶೋಕ್, ಕಾರ್ತೀಕ್, ನಾಗ, ದೇವರಾಜು, ಪಂಚೇಗೌಡ, ಮಹೇಶ್, ಯೋಗೇಶ್, ಬಾಬು, ಕೂಡಲಕುಪ್ಪೆ ಕೃಷ್ಣಪ್ಪ, ಸೇರಿದಂತೆ ಕಿರಂಗೂರು, ದರಸಗುಪ್ಪೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಸಾರ್ವಜನಿಕರು.