ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಜಿಲ್ಲೆಯಾದ್ಯಂತ ಅಕ್ರಮ ಅಕ್ಕಿ ಸಾಗಣೆ, ಮಟ್ಕಾ ಜೂಜಾಟ, ಅಕ್ರಮ ಮದ್ಯ(ಸರಾಯಿ) ಮಾರಾಟ, ಮಾದಕ ವಸ್ತುಗಳ ಮಾರಾಟ ಸೇರಿ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಪೊಲೀಸರು ಸಮರ ಸಾರಿದ್ದು, ಇಂತಹ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯೆಲ್ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಜಿಲ್ಲೆಯಾದ್ಯಂತ ಅಕ್ರಮ ಅಕ್ಕಿ ಸಾಗಣೆ, ಮಟ್ಕಾ ಜೂಜಾಟ, ಅಕ್ರಮ ಮದ್ಯ(ಸರಾಯಿ) ಮಾರಾಟ, ಮಾದಕ ವಸ್ತುಗಳ ಮಾರಾಟ ಸೇರಿ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಬಾಗಲಕೋಟೆ ಜಿಲ್ಲಾ ಪೊಲೀಸರು ಸಮರ ಸಾರಿದ್ದು, ಇಂತಹ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯೆಲ್ ಎಚ್ಚರಿಕೆ ನೀಡಿದರು.ಬನಹಟ್ಟಿ ಪೊಲೀಸ್ ಠಾಣೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ನೆಮ್ಮದಿ ಹಾಳು ಮಾಡುವ ಹಾಗೂ ಯುವಜನರನ್ನು ದುಷ್ಪರಿಣಾಮದತ್ತ ತಳ್ಳುವ ಅಕ್ರಮ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಅವಕಾಶ ನೀಡುವುದಿಲ್ಲ. ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ವಿಶೇಷ ಸೂಚನೆ ನೀಡಲಾಗಿದ್ದು, ನಿರಂತರ ದಾಳಿ ಮತ್ತು ತಪಾಸಣೆ ನಡೆಸುವಂತೆ ನಿರ್ದೇಶಿಸಲಾಗಿದೆ ಎಂದರು.
ಎಸ್‌ಪಿ ಅವರ ಮಾಹಿತಿ ಪ್ರಕಾರ, ಅಕ್ರಮ ಅಕ್ಕಿ ಸಾಗಣೆ, ಮಟ್ಕಾ, ಅಕ್ರಮ ಸರಾಯಿ ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಮೂರು ಬಾರಿ ಪ್ರಕರಣ ದಾಖಲಾದ ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯ ಅನ್ವಯ ಜಿಲ್ಲೆಯಿಂದ ಗಡಿಪಾರು ಮಾಡುವುದಾಗಿಯೂ ಎಚ್ಚರಿಕೆ ನೀಡಿದರು. ಸಮಾಜದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಅವರು ಸ್ಪಷ್ಟಪಡಿಸಿದರು.ಜಿಲ್ಲೆಯಲ್ಲಿ ಅಪರಾಧಮುಕ್ತ ವಾತಾವರಣ ನಿರ್ಮಿಸುವ ಉದ್ದೇಶದಿಂದ ವಿಶೇಷ ತಂಡಗಳನ್ನು ರಚಿಸಿ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಕ್ರಮ ದಂಧೆಗಳಲ್ಲಿ ತೊಡಗಿರುವವರು ಸ್ವಯಂಪ್ರೇರಿತರಾಗಿ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲವಾದರೆ ಕಾನೂನಿನ ಸಂಪೂರ್ಣ ವ್ಯಾಪ್ತಿಯಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಸ್‌ಪಿ ಸಿದ್ಧಾರ್ಥ ಗೋಯೆಲ್ ಎಚ್ಚರಿಕೆ ನೀಡಿದರು.
ಅಪರಾಧ ನಿಯಂತ್ರಣದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಜವಾಬ್ದಾರಿಯುತ ನಾಗರಿಕರಾಗಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.ಸಾರ್ವಜನಿಕರ ಸಹಕಾರವೇ ಅಪರಾಧ ನಿಯಂತ್ರಣದ ಪ್ರಮುಖ ಅಂಶವಾಗಿದ್ದು, ತಮ್ಮ ಸುತ್ತಮುತ್ತ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುವಂತೆ ಎಸ್‌ಪಿ ಮನವಿ ಮಾಡಿದರು. ಮಾಹಿತಿ ನೀಡುವ ವ್ಯಕ್ತಿಯ ಹೆಸರು ಹಾಗೂ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಟ್ಟು ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿ ಆಧರಿಸಿ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು.-ಸಿದ್ಧಾರ್ಥ ಗೋಯೆಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ