ನಗರಸಭೆಯಿಂದ ಅಭಿವೃದ್ಧಿ ಕಾರ್ಯ ಸರಾಗ: ಮಹೇಶ್ ಜೈನಿ

| Published : Nov 13 2025, 02:00 AM IST

ಸಾರಾಂಶ

ನಗರದ ಸಮಗ್ರ ಅಭಿವೃದ್ಧಿ ನಗರಸಭೆ ಬಿಜೆಪಿ ಆಡಳಿತ ಮಂಡಳಿಯ ಗುರಿಯಾಗಿದೆ ಎಂದು ಮಹೇಶ್‌ ಜೈನಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರಸಭೆಯ ಬಿಜೆಪಿ ಆಡಳಿತದ ವೇಗ ಸಹಿಸಲಾಗದೇ ಹತಾಶರಾಗಿ ಮೂಡ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಅವರು ಟೀಕೆ ಮಾಡುತ್ತಿದ್ದಾರೆ ಎಂದು ನಗರಸಭೆ ಉಪಾಧ್ಯಕ್ಷ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಮಗ್ರ ಅಭಿವೃದ್ಧಿ ನಗರಸಭೆ ಬಿಜೆಪಿ ಆಡಳಿತ ಮಂಡಳಿಯ ಗುರಿಯಾಗಿದೆ. ಸುಮಾರು ೩.೭೦ ಕೋಟಿ ರು. ವೆಚ್ಚದಲ್ಲಿ ನಗರದ ೨೩ ವಾರ್ಡ್‌ಗಳಲ್ಲಿ ರಸ್ತೆ, ತಡೆಗೋಡೆ ಇತ್ಯಾದಿ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡಿದೆ. ಇದನ್ನು ಸಹಿಸಲಾಗದೇ ರಾಜೇಶ್ ಯಲ್ಲಪ್ಪ ಅವರು, ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಹತಾಶರಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದ್ದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಮುಂದಿನ ದಿನಗಳಲ್ಲಿ ನಗರಸಭೆಯ ೧೦ ಲಕ್ಷ ಮತ್ತು ಎನ್‌ಡಿಆರ್‌ಎಫ್‌ನ ೩೮ ಲಕ್ಷದಲ್ಲಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಜತೆಗೆ ೧೭ ಲಕ್ಷ ವೆಚ್ಚದಲ್ಲಿ ಮೀನು ಮಾರುಕಟ್ಟೆ ಮತ್ತು ೨೫ ಲಕ್ಷ ವೆಚ್ಚದಲ್ಲಿ ೨ ಪಾರ್ಕ್‌ಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ, ವೈಯಕ್ತಿಕ ವಿಚಾರಗಳಿಗೆ ರಾಜೇಶ್ ಯಲ್ಲಪ್ಪ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಳದ ಉಪಾಧ್ಯಕ್ಷ ಬಿ.ಪಿ.ಡಿಶು, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷ ಅನಿತಾ ಪೂವಯ್ಯ, ಪ್ರಮುಖರಾದ ಜಗದೀಶ್ ಉಪಸ್ಥಿತರಿದ್ದರು.