ಈ ಹಿಂದೆ ಅಧಿಕಾರ ನಡೆಸಿದ ಸರ್ಕಾರಗಳ ನಿರ್ಲಕ್ಷ್ಯದಿಂದ ಸಾಕಷ್ಟು ಹಳ್ಳಿಗಳಲ್ಲಿ ರಸ್ತೆಗಳು ಹಾಳಾಗಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತಾಲೂಕಿನಲ್ಲಿ ಸಾವಿರಾರು ಕೋಟಿ ರು. ವೆಚ್ಚದಲ್ಲಿ ರಸ್ತೆಗಳು, ನಾಲೆಗಳ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕಳೆದ ಎರಡೂವರೆ ವರ್ಷಗಳಲ್ಲಿ ಮದ್ದೂರು ಕ್ಷೇತ್ರದಲ್ಲಿ 1 ಸಾವಿರ ಕೋಟಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಸಮೀಪದ ಗುರುದೇವರಹಳ್ಳಿ, ಕೊಕ್ಕರೆಬೆಳ್ಳೂರು ಹಾಗೂ ಕಡಿಲುವಾಗಿಲು ಗ್ರಾಮಗಳಲ್ಲಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬಿಡುಗಡೆಗೊಂಡ 1 ಕೋಟಿ ರು. ಹಣದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಹಿಂದೆ ಅಧಿಕಾರ ನಡೆಸಿದ ಸರ್ಕಾರಗಳ ನಿರ್ಲಕ್ಷ್ಯದಿಂದ ಸಾಕಷ್ಟು ಹಳ್ಳಿಗಳಲ್ಲಿ ರಸ್ತೆಗಳು ಹಾಳಾಗಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತಾಲೂಕಿನಲ್ಲಿ ಸಾವಿರಾರು ಕೋಟಿ ರು. ವೆಚ್ಚದಲ್ಲಿ ರಸ್ತೆಗಳು, ನಾಲೆಗಳ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಈಗಾಗಲೇ ತಾಲೂಕಿನಾದ್ಯಂತ 800 ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳು ಮುಗಿದಿವೆ. 350 ಕೋಟಿ ಅಭಿವೃದ್ಧಿ ಕಾಮಗಾರಿಗಳು ಟೆಂಡ‌ರ್ ಹಂತದಲ್ಲಿ ಬಾಕಿಯಿವೆ. ಅವುಗಳು ಕೂಡ ಈ ವಾರದೊಳಗೆ ಬಿಡುಗಡೆಯಾಗಲಿದೆ ಎಂದರು.

ನಾವು ಎಷ್ಟೇ ಒಳ್ಳೆಯ ಕೆಲಸಗಳನ್ನು‌ ಮಾಡಿದರೂ‌ ವಿಪಕ್ಷದವರು ಮೊಸರಲ್ಲಿ‌ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ‌. ನಾನು ಮಾಡುವ ಕೆಲಸ, ನನ್ನನ್ನು ಗುರುತಿಸಬೇಕು. ಯಾರೋ ವಿರೋಧಿಗಳು ನೀಡುವ ಹೇಳಿಕೆಗಳ ಬಗ್ಗೆ ತಲೆಕೆಡಿಸುಕೊಳ್ಳುವುದಿಲ್ಲ. ನನ್ನ ಧ್ಯೇಯ ಮದ್ದೂರು ಕ್ಷೇತ್ರದ ಅಭಿವೃದ್ಧಿ ಒಂದೇ ಎಂದು ತಿರುಗೇಟು ನೀಡಿದರು.

ಈ ವೇಳೆ ತಹಸೀಲ್ದಾರ್ ಪರಶುರಾಮ್ ಸತ್ತೇಗೆರಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎ.ಎಸ್.ರಾಜೀವ್, ಗ್ರಾಪಂ ಸದಸ್ಯೆ ಜಯಶೀಲ, ಮಾದೇಗೌಡ, ಅಪ್ಪಾಜಿಗೌಡ, ರಾಘವೇಂದ್ರ, ಬಸವೇಗೌಡ, ಪ್ರಸನ್ನ, ಶಿವಣ್ಣ, ಮಹದೇವ, ಮಧು, ಮತ್ತಿತರರು ಇದ್ದರು.

ಉಪಜಾತಿಯಲ್ಲೂ ಮಡಿವಾಳ ಎಂದೇ ಬರೆಸಿ: ಬಿ.ಆರ್.ಪ್ರಕಾಶ್

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಸುಮಾರು 13 ಲಕ್ಷ ಜನ ಮಡಿವಾಳ ಸಮುದಾಯದಲ್ಲಿದ್ದಾರೆ. ಅತ್ಯಂತ ಹಿಂದುಳಿದಿರುವ ಎಲ್ಲರೂ ಉಪ ಜಾತಿಯಲ್ಲಿಯೂ ಮಡಿವಾಳ ಎಂದೇ ಬರೆಸಬೇಕು ಎಂದು ಮಡಿವಾಳರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 12ರಿಂದ 13 ಲಕ್ಷ ಜನರು ಮಡಿವಾಳ ಸಮದಾಯದಲ್ಲಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯತ ಮಡಿವಾಳ ಎಂಬುದಾಗಿ ಹೇಳಲಾಗುತ್ತದೆ. ಅವರೂ ಸಹ ಈಗಾಗಲೇ ಸರ್ಕಾರ ನಡೆಸುತ್ತಿರುವ ಜಾತಿವಾರು ಸಮೀಕ್ಷೆಯಲ್ಲಿ ತಮ್ಮ ಮನೆ ಬಳಿ ಸಮೀಕ್ಷಕರು ಬಂದಾಗ ಮಡಿವಾಳ ಎಂಬುದನ್ನು ಬರೆಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ವೀರಣ್ಣ ಮಡಿವಾಳ್, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ರವಿ, ತಾಲೂಕು ಘಟಕದ ಅಧ್ಯಕ್ಷ ಗೋವಿಂದ, ನಿರ್ದೇಶಕರಾದ ವಿ.ಎಂ.ಪದ್ಮಾವತಿ, ಮಧು, ಶಿವಲಿಂಗಯ್ಯ ಇದ್ದರು.