ಕನ್ನಡಪ್ರಭ ವಾರ್ತೆ ಸುರಪುರ
ಬಾಲ್ಯದಿಂದಲೇ ದೇಶಸೇವೆಯ ಕನಸು ಕಂಡಿದ್ದ ತಾಲೂಕಿನ ಬಾದ್ಯಾಪುರ ಗ್ರಾಮದ ಯುವಕ ದೇವೇಂದ್ರಪ್ಪ ಕವಾಲ್ದಾರ್ ಅವರು ಅಗ್ನಿವೀರ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.ತಾಲೂಕಿನ ಬಾದ್ಯಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸೈನಿಕ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಗುರು ಸೂಗಪ್ಪ ಮೇಟಿ, ಶಿಸ್ತು, ಆತ್ಮವಿಶ್ವಾಸ ಹಾಗೂ ನಿರಂತರ ಪರಿಶ್ರಮದಿಂದ ದೇವೇಂದ್ರಪ್ಪ ಅಗ್ನಿವೀರ ಹುದ್ದೆಗೆ ಆಯ್ಕೆಯಾಗಿದ್ದು, ಅವರ ಸಾಧನೆ ಎಲ್ಲ ಯುವಕರಿಗೂ ಮಾದರಿಯಾಗಿದೆ ಎಂದು ಹೇಳಿದರು.
ದೇಶದ ರಕ್ಷಣೆಯಂತಹ ಮಹತ್ತರ ಜವಾಬ್ದಾರಿಯನ್ನು ಹೊರುವ ಅವಕಾಶ ದೊರೆತಿರುವುದು ಅವರ ಕುಟುಂಬದಷ್ಟೇ ಅಲ್ಲ, ಇಡೀ ಗ್ರಾಮದ ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಭಾಗದ ಯುವಕರೂ ಸಹ ದೇಶಸೇವೆಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಹುದು ಎಂಬುದಕ್ಕೆ ದೇವೇಂದ್ರಪ್ಪ ಉತ್ತಮ ಉದಾಹರಣೆಯಾಗಿದ್ದು, ಅವರ ಸಾಧನೆ ಇತರ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.ಅತಿಥಿ ಬೀರಲಿಂಗ ಮಗ್ಗದ್ ಮಾತನಾಡಿ, ಬಾದ್ಯಾಪುರ ಗ್ರಾಮದ ತಿಪ್ಪಣ್ಣ–ಶಾರದಾ ದಂಪತಿಯ ಪುತ್ರ ದೇವೇಂದ್ರಪ್ಪ ಕವಾಲ್ದಾರ್ ಅಗ್ನಿವೀರ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗುವ ಮೂಲಕ ಗ್ರಾಮ ಹಾಗೂ ಸುರಪುರ ತಾಲೂಕಿಗೆ ಕೀರ್ತಿ ತಂದಿದ್ದಾರೆ. ದೇಶಸೇವೆಯ ಪವಿತ್ರ ಪಯಣದಲ್ಲಿ ಅವರು ಇನ್ನಷ್ಟು ಉನ್ನತ ಸಾಧನೆ ಮಾಡಿ ಕುಟುಂಬ, ಊರು ಹಾಗೂ ರಾಜ್ಯದ ಗೌರವವನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದೇವೇಂದ್ರಪ್ಪ ಅವರನ್ನು ಗ್ರಾಮಸ್ಥರು, ಗಣ್ಯರು ಹಾಗೂ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು. ಪ್ರಕಾಶ್ ಮೂಡಬಿ, ಎಸ್‌ಡಿಎಂಸಿ ಉಪಾಧ್ಯಕ್ಷ ಅಯ್ಯಪ್ಪ ನಂದಳ್ಳಿ, ಶರಣಪ್ಪ ಎತ್ತಿನಮನಿ, ಆನಂದ್ ಕವಾಲ್ದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಲ್ಲು ಬಾದ್ಯಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಶಿಕ್ಷಕರಾದ ಭಾರತಿ, ಸುನಂದಾ, ಹಣಮಂತಿ, ಹಳ್ಳೆಮ್ಮಾ, ಬಸ್ಸಮ್ಮ , ರೂಪ ಕೊಳ್ಳೆರ ಸೇರಿದಂತೆ ಅನೇಕ ಗಣ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಯ೯ಕ್ರಮವನ್ನು ಶಿಕ್ಷಕಿ ಮರಿಲಿಂಗಮ್ಮ ನಿರೂಪಿಸಿದರು. ಮಂಜುನಾಥ ವಂದಿಸಿದರು.