ಜಿಲ್ಲೆಯ ಬಹುತೇಕ ರೈತರು ಸಾಲ ಮಾಡಿ ಚಿನ್ನಾಭರಣಗಳನ್ನು ಗಿರವಿಗಿಟ್ಟು, ಖಾಸಗಿ ಲೇವಾದೇವಿಗಾರರ ಹತ್ತಿರ ಬಡ್ಡಿಗೆ ಸಾಲ ಮಾಡಿ ಕಷ್ಟಪಟ್ಟು ಬೆಳೆದಿರುವ ಬೆಳೆ ಸಂರಕ್ಷಣೆ ಮಾಡಲು ಮುಂದಾಗಬೇಕು. ಬೆಳೆಗೆ ನೀರು ಇಲ್ಲದೆ, ಮುಂಗಾರು ಮಳೆಯ ವೈಫಲ್ಯದಿಂದ ಒಣಗಿ ಹೋಗುತ್ತಿರುವ ಬೆಳೆಯನ್ನು ನೋಡಿ ರೈತರು ಕಂಗಾಲಾಗುತ್ತಿದ್ದಾರೆ.
ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ ನೀರು ಹರಿಸಿ ಬೆಳೆ ರಕ್ಷಣೆ ಮಾಡಬೇಕು. ಈಗಾಗಲೇ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಕಿರಂಗೂರು ಪಾಪು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಸಂಸತರು, ಜಮೀನುಗಳಲ್ಲಿ ಒಣಗಿರುವ ಬೆಳೆ ಸಂರಕ್ಷಣೆ ಮಾಡಲು ಎಲ್ಲಾ ನಾಲೆಗಳಿಗೂ ನೀರು ಹರಿಸಲು ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.ಜಿಲ್ಲೆಯ ಬಹುತೇಕ ರೈತರು ಸಾಲ ಮಾಡಿ ಚಿನ್ನಾಭರಣಗಳನ್ನು ಗಿರವಿಗಿಟ್ಟು, ಖಾಸಗಿ ಲೇವಾದೇವಿಗಾರರ ಹತ್ತಿರ ಬಡ್ಡಿಗೆ ಸಾಲ ಮಾಡಿ ಕಷ್ಟಪಟ್ಟು ಬೆಳೆದಿರುವ ಬೆಳೆ ಸಂರಕ್ಷಣೆ ಮಾಡಲು ಮುಂದಾಗಬೇಕು. ಬೆಳೆಗೆ ನೀರು ಇಲ್ಲದೆ, ಮುಂಗಾರು ಮಳೆಯ ವೈಫಲ್ಯದಿಂದ ಒಣಗಿ ಹೋಗುತ್ತಿರುವ ಬೆಳೆಯನ್ನು ನೋಡಿ ರೈತರು ಕಂಗಾಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಆರ್‌ಎಸ್ ಜಲಾಶಯದಿಂದ ಈಗಿರುವ ಬೆಳೆಗಳಿಗೆ ನೀರು ಹರಿಸಿದರೆ ಎಷ್ಟೋ ಉಸಿರಾಡಿಕೊಳ್ಳಬಹುದು. ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಬಹುದು. ವರ್ಷದ ಬೆಳೆಯನ್ನೇ ನಂಬಿಕೊಂಡ ರೈತರು ಅದರಲ್ಲೇ ಸಂಸಾರ ಸಾಗಿಸಿಕೊಂಡು ಹೋಗಬೇಕು. ವರ್ಷದ ಬೆಳೆಯಲ್ಲಿ ಸಾಲಕ್ಕೆ ಬಡ್ಡಿ ಕಟ್ಟಬೇಕು. ಅದರಲ್ಲೇ ಕುಟುಂಬ, ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ, ಹಬ್ಬ ಹರಿದಿನಗಳು, ಮದುವೆ ಮುಂಜಿಗಳನ್ನು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.ಕೈಗೆ ಬಂದ ಬೆಳೆಯು ಬಾಯಿಗೆ ಬಾರದಂತಾಗಿದೆ. ಅಂತರ್ಜಲ ಕುಸಿತದಿಂದ ಕೆಲವು ಬೋರ್ ವೆಲ್‌ಗಳಲ್ಲೂ ಜಲ ಸಿಗುತ್ತಿಲ್ಲ. ಇತ್ತ ವರುಣನ ಅವಕೃಪೆಯು ಎದುರಾಗಿದೆ. ಎದೆಮಟ್ಟಕ್ಕೆ ಬಂದಿರುವ ಬೆಳೆಗಳು ನೀರಿಲ್ಲದೆ ಒಣಗಿ ಹೋಗುವ ಹಂತದಲ್ಲಿವೆ. ಆದ್ದರಿಂದ ಜಲಾಶಯದಿಂದ ಎಲ್ಲಾ ನಾಲೆಗಳಿಗೂ ನೀರು ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಒಣಗಿರುವ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡುವಂತೆ ಶಾಸಕರು, ಸಂಸದರು, ಜಲಸಂಪನ್ಮೂಲ ಸಚಿವರು, ಮಾಜಿ ಮಂತ್ರಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದ್ದಾರೆ.